ರಾಜಕೀಯ

ಸಿಬಿಐ ಬಿಕ್ಕಟ್ಟು: ಪ್ರಧಾನಿ ಮೋದಿಗೆ ಮೂರು ಪುಟಗಳ ಪತ್ರ ಬರೆದ ಖರ್ಗೆ

Lingaraj Badiger
ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಮನೆಗೆ ಕಳುಹಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಸಿಬಿಐ ನಿರ್ದೇಶಕರನ್ನು ಏಕಾಏಕಿ ಕಿತ್ತುಹಾಕಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಇಲ್ಲ.  ಸಿಬಿಐ ನಿರ್ದೇಶಕರ ಆಯ್ಕೆ ಉನ್ನತ ಮಟ್ಟದ ಕೊಲಿಜಿಯಂ ವ್ಯವಸ್ಥೆಯಿಂದ ಆಗಿರುತ್ತದೆ. ಈ ಕೊಲಿಜಿಯಂನಲ್ಲಿ ಪ್ರಧಾನಿ, ಪ್ರತಿಪಕ್ಷ ನಾಯಕ ಮತ್ತು ಸಿಜೆಐ ಇರುತ್ತಾರೆ. ಸಿಬಿಐ ನಿರ್ದೇಶಕರ ವಿರುದ್ಧ ದೂರು ಬಂದರೆ ಕೊಲಿಜಿಯಂ ಪರಿಶೀಲಿಸಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರ ಕೊಲಿಜಿಯಂನಲ್ಲಿ ಈ ವಿಚಾರ ಚರ್ಚಿಸದೆ ಸಿಬಿಐ ನಿರ್ದೇಶಕರನ್ನು ಕಿತ್ತುಹಾಕಿದ್ದು, ಈ ಸಂಬಂಧ ತಾವು ಪ್ರಧಾನಿಗೆ ಮೂರು ಪುಟಗಳ ಪತ್ರ ಬರೆದಿರುವುದಾಗಿ ತಿಳಿಸಿದರು.
ಕಡ್ಡಾಯ ರಜೆಯ ಮೇಲೆ ತೆರಳಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ರಾಫೆಲ್ ಡೀಲ್ ಪ್ರಕರಣದ ತನಿಖೆ ಆರಂಭಿಸಿದ್ದರಿಂದ ಅವರನ್ನು ಕಿತ್ತುಹಾಕಲಾಗಿದೆ. ಪ್ರಧಾನಿ ಮೋದಿ ಅವರು ರಾತ್ರಿ‌ ನಿದ್ದೆ ಬಾರದೆ ರಾತ್ರೋರಾತ್ರಿ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಮುಖ್ಯಸ್ಥರನ್ನು ಮತ್ತು ಉಪ ಮುಖ್ಯಸ್ಥರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ, ಸಿಬಿಐ ನಿರ್ದೇಶಕ ಹುದ್ದೆಗೆ ಮತ್ತೊಬ್ಬರನ್ನು ನೇಮಿಸಿದ್ದಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
SCROLL FOR NEXT