ರಾಜಕೀಯ

ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾರರಿಂದ ನೀರಸ ಪ್ರತಿಕ್ರಿಯೆ, ಶಾಂತಿಯುತ ಮುಕ್ತಾಯ

Sumana Upadhyaya

ಬೆಂಗಳೂರು: ರಾಜ್ಯದ 22 ಜಿಲ್ಲೆಗಳ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿ ಮುಗಿಯಿತು. ಮಹಾನಗರ ಪಾಲಿಕೆಗಳಿಗೆ ನಡೆದ ಮತದಾನ ಪ್ರಮಾಣ ಶೇ.53.8 ಇದ್ದರೆ, ಉಳಿದ ನಗರ ಸ್ಥಳೀಯ ಸಂಸ್ಥೆಗಳ ಮತ ಪ್ರಮಾಣ ಶೇ. 67.1 ರಷ್ಟು ದಾಖಲಾಗಿದೆ.

ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಮಹಾನಗರ ಪಾಲಿಕೆ ಸೇರಿದಂತೆ 22 ಜಿಲ್ಲೆಗಳ 29 ನಗರಸಭೆಗಳು, 53 ಪುರಸಭೆಗಳು ಹಾಗೂ 20 ಪಟ್ಟಣ ಪಂಚಾಯತಿಗಳಿಗೆ ನಿನ್ನೆ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಯಿತು. ಕೆಲವೆಡೆ ಅಡಚಣೆ, ಸಣ್ಣ ಪುಟ್ಟ ಗೊಂದಲ, ಸಮಸ್ಯೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ಮುಗಿಯಿತು. ಮತಕೇಂದ್ರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಬೆಳಗ್ಗೆ ಸಾಧಾರಣವಾಗಿಯೇ ಆರಂಭವಾದ ಮತ ಚಲಾವಣೆ ಮಧ್ಯಾಹ್ನದ ಮೇಲೆ ಸ್ವಲ್ಪ ಚುರುಕು ಪಡೆಯಿತು. ಮೂರು ನಗರ ಪಾಲಿಕೆಗಳಲ್ಲಿ ಬೇರೆ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದರೆ ಮತದಾನ ನೀರಸವಾಗಿತ್ತು. ನಗರ ಪಾಲಿಕೆಗಳಲ್ಲಿ ನಿನ್ನೆ ಅಪರಾಹ್ನ 3 ಗಂಟೆಯ ವೇಳೆಗೆ ಶೇಕಡಾ 38.49ರಷ್ಟು ಮತದಾನವಾಗಿದ್ದರೆ ಮೈಸೂರಿನ 65 ವಾರ್ಡ್ ಗಳಲ್ಲಿ ಕೇವಲ ಶೇಕಡಾ 35.25ರಷ್ಟು ಮತದಾನವಾಗಿತ್ತು.ಶಿವಮೊಗ್ಗ ಮತ್ತು ತುಮಕೂರುಗಳಲ್ಲಿ ಶೇಕಡಾ 41.23 ಮತ್ತು ಶೇಕಡಾ 45.83ರಷ್ಟಾಗಿತ್ತು.

ನಾಡಿದ್ದು ಸೋಮವಾರ ಫಲಿತಾಂಶ ಪ್ರಕಟವಾಗಲಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಇದು ಪ್ರತಿಷ್ಠೆಯ ಕಣವಾಗಿದೆ.

SCROLL FOR NEXT