ಬಾಗಲಕೋಟೆ: ಚುನಾವಣೆ ವೇಳೆ ಕೈ-ಕಮಲ ಮಾರಾಮಾರಿ, ಮಾಜಿ ಶಾಸಕ ಕಾಶಪ್ಪನವರ್ ಕಾರು ಜಖಂ
ಬಾಗಲಕೋಟೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿದ್ದ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿದ್ದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಕಾರು ಜಖಂ ಆಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದದಲ್ಲಿ ನಡೆದಿದೆ.
ಘಟನೆ ವೇಳೆ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದ್ದು ಕಾರುಗಳು ಹಾಗೂ ಪಿಕೆಪಿಎಸ್ ಕಟ್ಟಡಕ್ಕೆ ಹಾನಿಯಾಗಿದೆ. ಅಲ್ಲದೆ ಘಟನೆಯಲ್ಲಿ ಮಾಜಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ನಾಲ್ವರಿಗೆ ಗಾಯಗಳಾಗಿದೆ.
ಉದ್ರಿಕ್ತರಿಂದ ನಡೆದ ಕಲ್ಲು ತೂರಾಟದಲ್ಲಿ ಮಾಜಿ ಶಾಸಕ ಕಾಶಪ್ಪನವರ್ ಹಾಗು ಇಳಕಲ್ ಸರ್ಕಲ್ ಇನ್ಸ್ ಪೆಕ್ಟರ್ ಅವರುಗಳ ಕಾರು ಹಾನಿಗೊಂಡಿದೆ.
ಚುನಾವಣೆ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ಹೊಡೆದಾಟಗಳು ನಡೆದಿದೆ.ಉದ್ರಿಕ್ತರನ್ನು ಚದುರಿಸಲು ಪೋಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಹುನಗುಂದದ ಪಿಕೆಪಿಎಎಸ್ ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವನೆ ಇದಾಗಿದ್ದು ಅಧ್ಯ್ಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರವಿ ಹುಚನೂರ, ಬಿಜೆಪಿ ಬೆಂಬಲಿತ ಮುಕ್ಕಣ್ಣ ಮುಕ್ಕಣ್ಣವರ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ಬೆಂಬಲಿತ ವ್ಯಕ್ತಿಯ ಅವಿರೋಧ ಆಯ್ಕಗಾಗಿ ಪ್ರಯತ್ನ ಸಾಗಿತ್ತು.ಅಲ್ಲದೆ ಬಿಜೆಪಿ ಪಾಳಯದಲ್ಲಿದ್ದ ಓರ್ವ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷ ತನ್ನತ್ತ ಸೆಳೆದುಕೊಂಡಿತ್ತೆಂದೂ ಹೇಳಲಾಗಿದೆ.
ಗುರುವಾರ ಬೆಳಿಗ್ಗೆ ಕಾಂಗ್ರೆಸ್ ಬೆಂಬಲಿತರೊಡನೆ ಮಾಜಿ ಶಾಸಕ ಕಾಶಪ್ಪನವರ್ ಆಗಮನವಾಗುತ್ತಲೇ ಮಾತಿನ ಚಕಮಕಿ ಪ್ರಾರಂಭವಾಗಿ ಕಡೆಗೆ ಅದುವೇ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ.
ಘಟನೆ ವೇಳೆ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಜರಿದ್ದರು.