ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ
ಬೆಳಗಾವಿ: ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಪ್ರತಿಷ್ಠೆ ಪಣಕ್ಕಿಟ್ಟಿರುವ ಶಾಸಕಿ ಲಕ್ಷೀ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಹೈಕಮಾಂಡ್ ಆದೇಶಕ್ಕೂ ಕ್ಯಾರೇ ಅನ್ನುತ್ತಿಲ್ಲ. ಹಾಗಾಗಿ ದೋಸ್ತಿ ಸರಕಾರದ ಭವಿಷ್ಯಕ್ಕೆ ಆತಂಕ ತಂದೊಡ್ಡಿರುವ ಬೆಳಗಾವಿ ರಾಜಕಾರಣದ ಕ್ಲೈಮ್ಯಾಕ್ಸ್ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದು ಎಲ್ಲರ ಕಣ್ಣು ಬೆಳಗಾವಿಯತ್ತ ನೆಟ್ಟಿದೆ.
ಪಿಎಲ್ ಡಿ ಬ್ಯಾಂಕ್ ನಲ್ಲಿ ಶಾಸಕ ಸತೀಶ ಜಾರಕಿಹೊಳಿಗೆ ಅವಮಾನವಾದರೆ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದಇದರ ಪರಿಣಾಮ ಕಠಿಣವಾಗಿರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಮೇಶ್, ಸತೀಶ್ ಜಾರಕಿಹೊಳಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ತಮ್ಮ ಬೆಂಬಲ ಇರುವುದಾಗಿ ಹೇಳಿದ್ದಾರೆ. ಸದ್ಯದ ವಿವಾದಗಳಿಂದ ತಾವು ಬೇಸತ್ತಿದ್ದು, ಇದಕ್ಕೆ ಅಂತ್ಯ ಹಾಡಲು ನಾವು ನಿರ್ಧರಿಸಿದ್ದೇವೆ, ಸತೀಶ ಗೆ ಅವಮಾನ ವಾಗುವುದನ್ನು ನೋಡಿಕೊಂಜು ಸುಮ್ಮನಿರಲು ಸಾದ್ಯವಿಲ್ಲ, ತಾವು ತೆಗೆದುಕೊಳ್ಳುವ ಕಠಿಣ ನಿರ್ಧಾರ ರಾಜ್ಯ ರಾಜಕೀಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ 90 ಕೋಟಿ ರೂ. ನೀಡಿರುವ ಸುದ್ದಿ ಹರಿದಾಡುತ್ತಿರುವುದು ಭೀತಿ ಮೂಡಿಸಿದೆ. ಹೆಬ್ಬಾಳ್ಕರ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಮಟ್ಟಕ್ಕೆ ಅವರು ಇಳಿಯುತ್ತಾರೆ ಎಂದು ಊಹಿಸಿರಲಿಲ್ಲ. ಸತೀಶ ಜಾರಕಿಹೊಳಿ ಅವರೇ ಹೆಬ್ಬಾಳ್ಕರ್ ಗೆ ಜಿಲ್ಲಾಧ್ಯಕ್ಷ ಮಾಡಿದ್ದದರು. ಆಗ ಜಿಲ್ಲಾಧ್ಯಕ್ಷ ಮಾಡಲು ನಾನು ಒಪ್ಪಿರಲಿಲ್ಲ ಎಂದವರು ಹೇಳಿದರು. 2004 ರಲ್ಲಿ ಆಕೆ ರಾಜಕೀಯಕ್ಕೆ ಬಂದಾಗ ಸತೀಶ್ ಆಕೆಗೆ ಸಹಾಯ ಮಾಡಿದರು, ಆಕೆಯನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯನ್ನಾಗಿ ನೇಮಿಸಿದರು. ಅವರ ತಂದೆಗೆ ಕ್ಯಾನ್ಸರ್ ಆದಾಗ ಹಣ ನೀಡಿದ್ದೆ. ಲಕ್ಷ್ಮೀ ಸಹೋದರ ಚನ್ನರಾಜ ಹಟ್ಟಿಹೊಳಿ ಹೈದ್ರಾಬಾದ್ ವಿವಿಯಿಂದ ಹಣ ಇಲ್ಲದೆ ಹೊರ ಹಾಕಿದ್ದರು. ಆಗಲೂ ಸಹಾಯ ಮಾಡಿದ್ದೆ. ಹೆಬ್ಬಾಳ್ಕರ್ ಪುತ್ರನ ಶೈಕ್ಷಣಿಕಕ್ಕೂ ಸಹಾಯ ಮಾಡಿದ್ದೇನೆ ಎಂದು ಹೇಳಿದರು.
ಹೆಬ್ಬಾಳ್ಕರ್ ಗುಂಪನ್ನು ಗೋವಾದ ರೆಸಾರ್ಟ್ ಗೆ ಶಿಫ್ಟ್ ಮಾಡಿರುವುದು ಉರಿವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ, ಜಾರಕಿಹೊಳಿ ಸಹೋದರರ ಪಾಲಿಗೆ ಬಿಸಿತುಪ್ಪವಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಈ ನಿಲುವು ಆಕೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಂದು ನಿಲ್ಲಿಸಲಿದೆ, ಶುಕ್ರವಾರ ಬೆಳಗ್ಗೆ 10 ಗಂಟೆಗೆ ಚುನಾವಣೆ ನಡೆಯಲಿದ್ದು, ಎಲ್ಲಾ ನಿರ್ದೇಶಕರುಗಳು ನೇರವಾಗಿ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ,15 ಜನ ನಿರ್ದೇಶಕರುಗಳ ಪೈಕಿ 9 ಮಂದಿ ತಮ್ಮ ಪರವಾಗಿದ್ದು ಇನ್ನು ಆರು ಮಂದಿ ಸತೀಶ್ ಗುಂಪಿನಲ್ಲಿದ್ದಾರೆ, ತಮಗೆ ಬಹುಮತ ಇರುವುದಾಗಿ ಹೆಬ್ಬಾಳ್ಕರ್ ಘೋಷಿಸಿದ್ದಾರೆ.
ಡಿ.ಕೆ ಶಿವಕುಮಾರ್ ಮತ್ತು ನಾನು ಉತ್ತಮ ಸ್ನೇಹಿತರು, ನಾನು ಸಚಿವನಾಗುವುದಕ್ಕೆ ಅವರು ಸಹಾಯ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos