ಮೈಸೂರು: ಬೆಳಗಾವಿ ರಾಜಕಾರಣದ ಬೆಳವಣಿಗೆಗಳನ್ನು ಬಳಸಿಕೊಳ್ಳಲಿ ಬಿಜೆಪಿ ತೆರೆಮರೆಯ ಕಸರತ್ತು ನಡೆಸುತ್ತಿರುವುದು ಜೆಡಿಎಸ್ ಪಾಳೆಯದಲ್ಲಿ ಗೊಂದಲಕ್ಕೆ ಕಾರಣವಾದರೂ ಪಕ್ಷ ಮತ್ತು ಸರ್ಕಾರ ಯಾವುದೇ ರೀತಿಯಲ್ಲಿಯೂ ಇಕ್ಕಟ್ಟಿಗೆ ಸಿಲುಕುವುದಿಲ್ಲ ಎಂಬ ಆತ್ಮವಿಶ್ವಾಸದಲ್ಲಿ ಮುಂದುವರೆದಿದೆ.
ಸಮ್ಮಿಶ್ರ ಸರ್ಕಾರದ ಪರಿಸ್ಥಿತಿಯು ಡೋಲಾಯಮಾನವಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಟೀಕಿಸುತ್ತಿರುವುದರ ಜೊತೆಗೆ ರಾಜಕೀಯ ದಾಳಗಳನ್ನು ಉರುಳಿಸಲಾರಂಭಿಸಿದೆ.
ಕಾಂಗ್ರೆಸ್ಸಿನ ಜಾರಕಿಹೊಳಿ ಸಹೋದರರು ತಮ್ಮ ಪಕ್ಷದ ವಿರುದ್ಧ ತಿರುಗಿ ಬಿದ್ದಿರುವುದು ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ. ಇದನ್ನೇ ತಮ್ಮ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ತಂತ್ರಗಾರಿಕೆಯಲ್ಲಿ ತೊಡಗಿದೆ.
ಈ ನಡುವೆ ಹೇಳಿಕೆ ನೀಡಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು, ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಬಹಳ ಹತ್ತಿರದಿಂದ ನೋಡುತ್ತಿದ್ದೇವೆಂದು ಹೇಳಿದ್ದಾರೆ.
ಬಿಜೆಪಿ ತಂತ್ರಗಳಿಗೆ ನಾವು ತಲೆಕೆಡಿಸಿಕೊಳ್ಳುತ್ತಿಲ್ಲ. ಬಿಜೆಪಿ ಉರುಳಿಸಲು ನಮ್ಮ ಬಳಿಯೂ ಪ್ರತಿ ತಂತ್ರವಿದೆ. ಬಿಕ್ಕಟ್ಟಿನಿಂದ ಬಿಜೆಪಿಯವರು ಲಾಭ ಪಡೆಯುವುದಕ್ಕೂ ಮುನ್ನ ಸಮಸ್ಯೆಗಳು ಬಗೆಹರಿಯಲಿ ಎಂದು ಆಶಿಸುತ್ತೇವೆಂದು ಕುಮಾರಸ್ವಾಮಿಯವರು ಹೇಳಿದ್ದಾರೆ.
ಈ ನಡುವೆ ಕಾಂಗ್ರೆಸ್ ನಲ್ಲಿ ಎದುರಾಗಿರುವ ಬಿಕ್ಕಟ್ಟು ಗಮಿಸುತ್ತಿರುವ ದೇವೇಗೌಡ ಅವರು, ಶೀಘ್ರದಲ್ಲಿಯೇ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಿ, ಬಿಕ್ಕಟ್ಟು ಬಗೆಹರಿಸಲು ಮಾರ್ಗಗಳನ್ನು ಕಂಡು ಹಿಡಿಯಲಿದ್ದಾರೆಂದು ತಿಳಿದುಬಂದಿದೆ.
ರಾಜ್ಯ ರಾಜಕಾರಣ ಬೆಳವಣಿಗೆಗ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರು, ಜನತಾಂತ್ರಿಕ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಜನರ ಸಮಸ್ಯೆ ಬಗ್ಗೆ ಅರ್ಥ ಮಾಡಿಕೊಂಡು ಅಭಿವೃದ್ಧಿ ಬಗ್ಗೆ ಚಿಂತಿಸದೇ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮೂರು ರಾಜಕೀಯ ಪಕ್ಷಗಳು ಮುಂದಾಗಿರುವುದು ದುರಂತ ಎಂದು ಹೇಳಿದ್ದಾರೆ.