ಹುಬ್ಬಳ್ಳಿ: ಬಿಜೆಪಿ ಮುಖಂಡರೊಬ್ಬರು ನನಗೆ ತಮ್ಮ ಪಕ್ಷಕ್ಕೆ ಸೇರುವಂತೆ ಆಮಿಷ ಒಡ್ಡಿದ್ದರು ಎಂದು ಕಾಂಗ್ರೆಸ್ ಶಾಸಕ ಸಿ.ಎಸ್ ಶಿವಳ್ಳಿ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಳ್ಳಿ, ಬಿಜೆಪಿಯ ಮಾಜಿ ಸಚಿವರೊಬ್ಬರು ನನಗೆ ಆಮಿಷ ಒಡ್ಡಿದ್ದು ನಿಜ. ಆದರೆ ಅವರು ನೀಡಲು ಮುಂದಾದ ಎಲ್ಲ ಭರವಸೆಗಳನ್ನು ನಾನು ತಳ್ಳಿ ಹಾಕಿದ್ದೇನೆ ಎಂದಿದ್ದಾರೆ.
ತಮಗೆ ಆಮಿಷ ಒಡ್ಡಿದ ಬಿಜೆಪಿ ನಾಯಕನ ಹೆಸರು ಹಾಗೂ ಯಾವ ಭರವಸೆ ನೀಡಿದ್ದರು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ ಶಿವಳ್ಳಿ, ನನಗೆ ರಾಜಕೀಯ ಜೀವನ ಕೊಟ್ಟಿದ್ದು ಕಾಂಗ್ರೆಸ್. ಹೀಗಾಗಿ ಪಕ್ಷವನ್ನು ಬಿಟ್ಟು ಹೋಗುವ ವಿಚಾರವನ್ನು ಎಂದಿಗೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ನಾನು ಹಿಂದುಳಿದ ವರ್ಗದ ಹಿರಿಯ ಕಾಂಗ್ರೆಸ್ ಶಾಸಕನಾಗಿದ್ದು, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವೆ. ಈ ಕುರಿತು ಪಕ್ಷದ ನಾಯಕರಿಗೆ ಹಾಗೂ ಹೈಕಮಾಂಡ್‍ಗೆ ಒತ್ತಡ ಹೇರಿದ್ದು ನಿಜ. ಸಚಿವ ಸ್ಥಾನ ನೀಡಲಿಲ್ಲವೆಂದು ಪಕ್ಷ ಬಿಟ್ಟು ಹೋಗುವ ನಿರ್ಧಾರ ಕೈಗೊಂಡಿಲ್ಲ. ವಯಸ್ಸಿದೆ, ಅವಕಾಶಗಳಿವೆ ಮುಂದಿನ ಅವಧಿಯಲ್ಲಿ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics