ರಾಜಕೀಯ

ಸಮ್ಮಿಶ್ರ ಸರ್ಕಾರ ಉಳಿಸುವ ಹೊಣೆ ಸಿದ್ದರಾಮಯ್ಯ ಹೆಗಲಿಗೆ ಹಾಕಿದ ಕಾಂಗ್ರೆಸ್ ಹೈಕಮಾಂಡ್!

Sumana Upadhyaya

ಬೆಂಗಳೂರು: 12 ದಿನಗಳ ಯುರೋಪ್ ಪ್ರವಾಸ ಮುಗಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್ಸಾದ ಕೆಲವೇ ಗಂಟೆಗಳಲ್ಲಿ, ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟನ್ನು ಶಮನ ಮಾಡುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ ಅವರಿಗೊಪ್ಪಿಸಿತು.

ರಾಜ್ಯ ರಾಜಕೀಯದಲ್ಲಿ ಬಿಕ್ಕಟ್ಟು ಉಲ್ಭಣಗೊಂಡ ನಂತರ ಕಾಂಗ್ರೆಸ್ ನಲ್ಲಿನ ಭಿನ್ನಾಭಿಪ್ರಾಯಗಳನ್ನು ಶಮನ ಮಾಡುವ ಕೆಲಸಕ್ಕೆ ಯುರೋಪ್ ಪ್ರವಾಸ ಮುಗಿಸಿ ಬಂದ ಕೂಡಲೇ ಕಾರ್ಯತತ್ಪರರಾದ ಸಿದ್ದರಾಮಯ್ಯನವರ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗಮಿಸಿದರು. ಮೈತ್ರಿ ಸರ್ಕಾರದಲ್ಲಿನ ಬಿಕ್ಕಟ್ಟನ್ನು ಶಮನಗೊಳಿಸಲು ಚರ್ಚೆ, ಮಾತುಕತೆಯನ್ನು ನಾಯಕರು ನಡೆಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಜಾರಕಿಹೊಳಿ ಸಹೋದರರಿಂದ ಉಂಟಾಗಿರುವ ಗೊಂದಲ ಬಗೆಹರಿಸುವ ಹೊಣೆಗಾರಿಕೆಯನ್ನು ಕಾಂಗ್ರೆಸ್ ಹೈಕಮಾಂಡ್, ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯನವರಿಗೆ ವಹಿಸಿದ್ದು, ಅಷ್ಟೇ ಅಲ್ಲದೆ ಸಮ್ಮಿಶ್ರ ಸರ್ಕಾರದ ಬಗ್ಗೆ ಅನಗತ್ಯ ಹೇಳಿಕೆ ನೀಡದಂತೆ ಬೆಂಬಲಿಗ ಸಚಿವರು ಹಾಗೂ ಶಾಸಕರಿಗೆ ತಿಳಿಹೇಳುವಂತೆಯೂ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೆ ಸಿ ವೇಣುಗೋಪಾಲ್, ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ರಾಷ್ಟ್ರದ ಮುಂದಿನ ರಾಜಕೀಯದ ದೃಷ್ಟಿಯಿಂದ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಬೇಕು.  ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿವರು ಕರ್ನಾಟಕದ ಬೆಳವಣಿಗೆ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಇದಕ್ಕೆ ಸಿದ್ದರಾಮಯ್ಯ ಅವರು, ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಆಗುವುದಿಲ್ಲ. ಕೆಲವೊಂದು ಬೇಸರ ಇರಬಹುದು, ಅದನ್ನು ಸರಿಪಡಿಸೋಣ. ನನಗೆ ಸಂಪೂರ್ಣ ಮಾಹಿತಿಯಿಲ್ಲ, ನಾನು ಅವರನ್ನು ಕರೆದು ಮಾತನಾಡಿಸುತ್ತೇನೆ ಎಂದು ಹೇಳಿದರು ಎನ್ನಲಾಗಿದೆ.

SCROLL FOR NEXT