ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿರುವ ಜಾರಕಿಹೊಳಿ ಸಹೋದರರ ಬಂಡಾಯ ಮತ್ತಷ್ಟು ಬಿಗಡಾಯಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಂಧಾನ ಕೂಡ ವಿಫಲವಾಗಿದೆ ಎನ್ನಲಾಗಿದೆ.
ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಧಾನ ಸಭೆ ಯಶಸ್ವಿಯಾಗಿಲ್ಲ. ಜತೆಗೆ ಮುಂದಿನ ರಾಜಕೀಯ ನಡೆಯನ್ನು ಬಹಿರಂಗಪಡಿಸಲು ಮಂಗಳವಾರ ಸುದ್ದಿಗೋಷ್ಠಿ ನಡೆಸಲು ಅತೃಪ್ತ ಶಾಸಕರು ತೀರ್ಮಾನಿಸಿದ್ದಾರೆ. ಇದರೊಂದಿಗೆ ಮೈತ್ರಿ ಸರಕಾರದ ಹಣೆಬರಹ ನಿರ್ಧರಿಸಲು ಮುಹೂರ್ತ ನಿಗದಿಯಾದಂತಾಗಿದೆ. ಹೈಕಮಾಂಡ್ ಸೂಚನೆಯಂತೆ ಕಾಂಗ್ರೆಸ್‌ನ ಅತೃಪ್ತ ಶಾಸಕರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸೋಮವಾರ ಮಾತುಕತೆ ನಡೆಸಿದರು. ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರನ್ನೂ ತಮ್ಮ ನಿವಾಸಕ್ಕೆ ಕರೆಸಿಕೊಂಡು ಚರ್ಚಿಸಿದರು. ಆದರೆ, ಸಿದ್ದರಾಮಯ್ಯ ಸಂಧಾನ ಸೂತ್ರಕ್ಕೆ ಜಾರಕಿಹೊಳಿ ಬಗ್ಗಲಿಲ್ಲ. ತಮ್ಮ ಬೇಡಿಕೆ ಈಡೇರಿಸಲು ಹೈಕಮಾಂಡ್ ಮಧ್ಯೆ ಪ್ರವೇಶಿಸಬೇಕು ಎಂಬ ಒತ್ತಡ ಹೇರಿದರು ಎನ್ನಲಾಗಿದೆ. ಈ ತಿಂಗಳ ಅಂತ್ಯದೊಳಗೆ ಸಂಪುಟ ವಿಸ್ತರಣೆ ಆಗುವುದು ಖಚಿತವಾಗಿದ್ದು ಅಲ್ಲಿ ತನಕ ಕಾಯುವಂತೆ ಸಿದ್ದರಾಮಯ್ಯ ತಿಳಿ ಹೇಳಿದ್ದಾರೆಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಡಿಸಿಎಂ ಹುದ್ದೆ ಕೇಳಿದ್ದಾರಂದೂ, ಈ ಹುದ್ದೆ ನೀಡುವ ಕುರಿತು ಬಿಜೆಪಿ ಭರವಸೆ ನೀಡಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಅವಾಕ್ಕಾದ ಸಿದ್ದರಾಮಯ್ಯ ಅವೆಲ್ಲಾ ಇಲ್ಲಿ ನಡೆಯೊಲ್ಲ. ಇದು ಕಾಂಗ್ರೆಸ್ ಪಕ್ಷ ಎಂದು ಗದರಿದ್ದಾರೆ ಎನ್ನಲಾಗಿದೆ. ಅಂತೆಯೇ ಜಾರಕಿಹೊಳಿ ಹಲವು ಬೇಡಿಕೆಗಳನ್ನು ಇರಿಸಿದ್ದರು. ಇದಕ್ಕ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, 'ಬೆಳಗಾವಿ ರಾಜಕಾರಣದಲ್ಲಿ ಬೇರೆಯವರು ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳುವುದಾಗಿ ಹೈಕಮಾಂಡ್ ಭರವಸೆ ನೀಡಿದೆ. ನೀವು ಬಯಸಿದಂತೆ ಪಿಎಲ್‌ಡಿ ಬ್ಯಾಂಕ್ ಚುನಾವಣೆಯೂ ನಡೆದಿದೆ. ಹಾಗಾಗಿ ಈ ಗೊಂದಲವನ್ನು ಇಲ್ಲಿಗೇ ಬಿಡಿ. ಬಹಿರಂಗ ಹೇಳಿಕೆ ನೀಡುವುದನ್ನು ನಿಲ್ಲಿಸಿ,' ಎಂದು ರಮೇಶ್ ಜಾರಕಿಹೊಳಿ ಅವರಿಗೆ ಸಿದ್ದರಾಮಯ್ಯ ಸೂಚಿಸಿದರು.
ಆದರೆ ಪಟ್ಟು ಬಿಡದ ಜಾರಕಿಹೊಳಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲೇ ಸಭೆ ನಡೆಸಿ ಈ ಬಿಕ್ಕಟ್ಟಿಗೆ ಅಂತ್ಯ ಹಾಡಬೇಕೆಂದು ಒತ್ತಾಯಿಸಿದರು. ಇದಕ್ಕೆ ತಮ್ಮ ಆಕ್ಷೇಪವೇನೂ ಇಲ್ಲವೆಂದು ಹೇಳಿದ ಸಿದ್ದರಾಮಯ್ಯ, ದೆಹಗೆ ಹೋಗಿ ಮಾತುಕತೆ ನಡೆಸಬಹುದು ಎಂದು ಕೈಚೆಲ್ಲಿದರು ಎಂದು ತಿಳಿದು ಬಂದಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್ ಬಿಡುವ ಪ್ರಶ್ನೆಯೂ ಇಲ್ಲವೆಂದು ಸಿದ್ದು ಭೇಟಿಗೂ ಮುನ್ನ ಪ್ರತಿಕ್ರಿಯಿಸಿದ್ದ ಜಾರಕಿಹೊಳಿ, ದೆಹಲಿಗೆ ಹೋಗುತ್ತಿಲ್ಲ. ಹೈಕಮಾಂಡ್ ನಿಂದಲೂ ಯಾವುದೇ ಬುಲಾವ್ ಬಂದಿಲ್ಲ. ನಾಯಕರಾದ ಸಿದ್ದರಾಮಯ್ಯ ಜತೆಗೆ ಚರ್ಚಿಸಲಾಗಿದೆ. ಅದರ ವಿವರ ಹೇಳಲು ಸಾಧ್ಯವಿಲ್ಲವೆಂದು ಸಿದ್ದು ಭೇಟಿಯ ನಂತರ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics