ರಾಜಕೀಯ

ವಿಧಾನ ಪರಿಷತ್ ಉಪ ಚುನಾವಣೆ; ಇಬ್ಬರು ಅಭ್ಯರ್ಥಿಗಳ ಪರವಾಗಿ ರಾಮಲಿಂಗಾ ರೆಡ್ಡಿ ಲಾಬಿ

Sumana Upadhyaya

ಬೆಂಗಳೂರು: ಮುಂಬರುವ ವಿಧಾನ ಪರಿಷತ್ ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ತೀವ್ರ ಉತ್ಸುಕವಾಗಿದ್ದಾರೆ. ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಸೇರ್ಪಡೆಯಾಗದಿರುವ ರಾಮಲಿಂಗಾ ರೆಡ್ಡಿ ನಿನ್ನೆ ದೆಹಲಿಗೆ ತೆರಳಿ ವಿಧಾನ ಪರಿಷತ್ ನ ಎರಡು ಸದಸ್ಯ ಸ್ಥಾನಗಳಿಗೆ ಲಾಬಿ ನಡೆಸುತ್ತಿದ್ದುದು ಕಂಡುಬಂತು.

ನಿನ್ನೆ ದೆಹಲಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ವಿಧಾನ ಪರಿಷತ್ ಉಪ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಹಿಡಿದುಕೊಂಡು ಹೋಗಿದ್ದರು. ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಮುನ್ನ ರಾಮಲಿಂಗಾ ರೆಡ್ಡಿ ಈ ನಾಯಕರನ್ನು ಭೇಟಿ ಮಾಡಿ ತಮ್ಮವರ ಪರ ಲಾಬಿ ನಡೆಸಿದ್ದಾರೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬೇರೆ ಅತೃಪ್ತ ಕಾಂಗ್ರೆಸ್ ನಾಯಕರಿಗಿಂತ ರಾಮಲಿಂಗಾ ರೆಡ್ಡಿ ಭಿನ್ನವಾಗಿದ್ದರು. ಅಸಮಾಧಾನ,ಭಿನ್ನಮತೀಯವನ್ನು ಎಲ್ಲಿಯೂ ತೋರಿಸಿಕೊಳ್ಳಲಿಲ್ಲ. ಇದೀಗ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮಧ್ಯ ಪ್ರವೇಶಿಸಿರುವ ರಾಮಲಿಂಗಾ ರೆಡ್ಡಿ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ತಮ್ಮ ಕಡೆಯವರಿಗೆ ಸಿಟಿ ಕಾರ್ಪೋರೇಟ್ ಹುದ್ದೆ ಕೊಡಿಸುವ ನಿಟ್ಟಿನಲ್ಲಿ ಈ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ತಮ್ಮ ಕಡೆಯವರಿಗೆ ಸೀಟು ಕೊಡಿಸಲು ಕಾತರರಾಗಿದ್ದಾರೆ ಎನ್ನಲಾಗುತ್ತಿದೆ.

ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಯು ಬಿ ವೆಂಕಟೇಶ್ ಮತ್ತು ಎಂ ಸಿ ವೇಣುಗೋಪಾಲ್ ಅವರಿಗೆ ಸ್ಪರ್ಧಿಸಲು ಅವಕಾಶ ಕೊಡಿಸುವ ಕಾತರದಲ್ಲಿ ರಾಮಲಿಂಗಾ ರೆಡ್ಡಿ ಇದ್ದಾರೆ. ಈ ಇಬ್ಬರ ಪರವಾಗಿ ಲಾಬಿ ನಡೆಸಿದ್ದಾರೆ. ವೇಣುಗೋಪಾಲ್ 2013ರಿಂದ ಜಯನಗರ ಕ್ಷೇತ್ರದ ವಿಧಾನಸಭೆ ಅಭ್ಯರ್ಥಿಯಾಗಿದ್ದರು. ಈ ಬಾರಿ ಸ್ಪರ್ಧಿಸಲು ಟಿಕೆಟ್ ನ್ನು ರಾಮಲಿಂಗಾ ರೆಡ್ಡಿಯವರ ಪುತ್ರಿ ಸೌಮ್ಯ ರೆಡ್ಡಿಗೆ ನೀಡಿ ಅವರು ಶಾಸಕಿಯಾಗಿ ಆರಿಸಿ ಬಂದರು.

ಮೂಲತಃ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಆಪ್ತರಾಗಿರುವ ವೇಣುಗೋಪಾಲ್ ಅವರಿಗೆ ಅವರ ಬೆಂಬಲ ಸಿಕ್ಕಿಲ್ಲ. ರಾಮಲಿಂಗಾ ರೆಡ್ಡಿಯವರು ವೇಣುಗೋಪಾಲ್ ಗೆ ಈ ಬಾರಿಯ ಜಯನಗರ ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸಬೇಕಾಗಿದೆ. ಜಯನಗರ ಕ್ಷೇತ್ರದ ಮತ್ತೊಬ್ಬ ಅಭ್ಯರ್ಥಿ ಯು ಬಿ ವೆಂಕಟೇಶ್ ಅವರ ಪರವಾಗಿ ಸಹ ರಾಮಲಿಂಗಾ ರೆಡ್ಡಿ ಲಾಬಿ ಮಾಡುತ್ತಿದ್ದಾರೆ.

SCROLL FOR NEXT