ಬೆಂಗಳೂರು: ಸರ್ಕಾರವನ್ನು ಅಸ್ಥಿರಗೊಳಿಸಲು ಮೈತ್ರಿ ಪಕ್ಷದ ಶಾಸಕರಿಗೆ ಬಿಜೆಪಿ ಹಾಕುತ್ತಿರುವ ಗಾಳಕ್ಕೆ ತಿರುಗೇಟು ನೀಡಲು ಜೆಡಿಎಸ್ ತನ್ನ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳುವ ಕಾರ್ಯತಂತ್ರವನ್ನು ರೂಪಿಸಿದೆ.
ಇದಕ್ಕಾಸಿ ಸರ್ಕಾರದ ಯೋಜನೆಗಳ ಜಾರಿ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಕಾರ್ಯಪ್ರವೃತ್ತವಾಗಿದೆ.
ಮೈತ್ರಿ ಸರ್ಕಾರದಲ್ಲಿದ್ದರೂ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ಮಾಡುತ್ತಿಲ್ಲ. ಇದು ಶಾಸಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಬಿಜೆಪಿಯು ಮೈಂತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಸಚಿವ ಸ್ಥಾನ ಮತ್ತು ಕೋಟ್ಯಾಂತರ ರುಪಾಯಿ ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ನಡೆಸಿದೆ.
ಬಿಜೆಪಿಯ ಈ ಪ್ರಯತ್ನಿದಿಂದಾಗಿ ಶಾಸಕರು ಆಮಿಷಕ್ಕೊಳಗಾಗುವ ಸಾಧ್ಯತೆಯಿರುವುದರಿಂದ ಜೆಡಿಎಸ್ ವರಿಷ್ಠರು ಇದೀಗ ಎಚ್ಚೆತ್ತುಕೊಂಡಿದ್ದಾರೆ.
ಇದರಂತೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ಈ ನಿಟ್ಟಿನಲ್ಲಿ ಹಾಸನದಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ.
ಬೇಲೂರು ರಸ್ತೆಯಲ್ಲಿನ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಸಂಜೆ ಸಭೆ ನಡೆಯಲಿದ್ದು, ಜೆಡಿಎಸ್ ವರಿಷ್ಠ ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ ವಿಶ್ವನಾಥ್ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ನಡೆದ ಅನೌಪಚಾರಿಕ ಚರ್ಚೆಯಲ್ಲಿಯೂ ಬಿಜೆಪಿ ಅಪರೇಷನ್ ಕಮಲದ ಬಗ್ಗೆ ಗಂಭೀರವಾಗಿ ಸಮಾಲೋಚನೆ ನಡೆಸಲಾಗಿತ್ತು. ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಆಯಾ ಪಕ್ಷದ ಸಚಿವರು ಮತ್ತು ಮುಖಂಡರು ತೆಗೆದುಕೊಳ್ಳಬೇಕು. ಬಿಜೆಪಿಯವರು ಮೈತ್ರಿ ಪಕ್ಷದವನ್ನು ಸೆಳೆಯಲು ಗಂಭೀರವಾಗಿಯೇ ಪ್ರಯತ್ನ ನಡೆಸಿದ್ದಾರೆ. ಆದರೆ, ಮೈತ್ರಿ ಸರ್ಕಾರದ ಶಾಸಕರು ಯಾವುದೇ ಆಮಿಷಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕೆಂಬುದರ ಕುರಿತು ಚರ್ಚಿಸಲಾಗಿತ್ತು.
ರಾಜ್ಯ ಸರ್ಕಾರವನ್ನು ಉರುಲಿಸಲು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿರುವುದು ಮತ್ತು ರಾಜ್ಯ ರಾಜಕೀಯ ಚಟುವಟಿಕೆಗಳು ದಿನೇ ದಿನೇ ಹೊಸ ತಿರುವು, ದಿಕ್ಕು ಪಡೆದುಕೊಳ್ಳುತ್ತಿರುವ ಕಾರಣ ಇಂದು ಸಬೆ ಕರೆಯಲಾಗಿದೆ.