ರಾಜಕೀಯ

ರಫೆಲ್ ಒಪ್ಪಂದಕ್ಕೆ ಹೋಲಿಸಿದರೆ ಬೋಫೋರ್ಸ್ ಸಣ್ಣ ಹಗರಣ: ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ

Sumana Upadhyaya

ಬೆಂಗಳೂರು: ಕೇಂದ್ರ ಸರ್ಕಾರ ಫ್ರಾನ್ಸ್ ಸರ್ಕಾರದೊಂದಿಗೆ ಮಾಡಿಕೊಂಡಿರುವ ರಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತು ಆರೋಪ ಮುಂದುವರಿಸಿರುವ ಕಾಂಗ್ರೆಸ್, ರಫೆಲ್ ಒಪ್ಪಂದಕ್ಕೆ ಹೋಲಿಸಿದರೆ ಬೋಫೋರ್ಸ್ ಹಗರಣ ಸಣ್ಣ ಪ್ರಮಾಣದ್ದು ಎಂದು ಹೇಳಿದೆ.

ಈ ಬಗ್ಗೆ ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವು ಕೋಟಿ ಒಪ್ಪಂದದ ಅಕ್ರಮದಲ್ಲಿ ಭಾಗಿಯಾಗಿದ್ದು ಬೋಫೋರ್ಸ್ ಗೆ ಹೋಲಿಸಿದರೆ ಇದು ಬಹಳ ದೊಡ್ಡ ಹಗರಣ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ದೇಶಕ್ಕೆ ಅಗೌರವ ಉಂಟುಮಾಡಿದ್ದಾರೆ. ಅವರು ಸತತ ಸುಳ್ಳು ಹೇಳಿಕೊಂಡು ಬರುತ್ತಿದ್ದು ಪ್ರತಿ ಸುಳ್ಳುಗಳನ್ನು ಬಯಲಿಗೆಳೆಯಲಾಗುತ್ತಿದೆ. ಬೋಫೋರ್ಸ್ ಕೇವಲ 60 ಕೋಟಿ ರೂಪಾಯಿಗಳ ಹಗರಣ, ಆದರೆ ರಫೆಲ್ ಯುದ್ಧ ವಿಮಾನ ಒಪ್ಪಂದ ನೇರವಾಗಿ ಬರೋಬ್ಬರಿ 58 ಸಾವಿರ ಕೋಟಿ ರೂಪಾಯಿಗಳದ್ದು ಎಂದು ಮೊಯ್ಲಿ ಹೇಳಿದರು.
ಹಗರಣದಲ್ಲಿ ಬಂದ ಹಣವನ್ನು ಬಿಜೆಪಿ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಅಮಿತ್ ಶಾ ಖಜಾನೆಗೆ ಹೋಗಿದೆ ಎಂದು ಟೀಕಿಸಿದರು.

ಆದರೆ ವೀರಪ್ಪ ಮೊಯ್ಲಿಯವರ ಈ ಹೇಳಿಕೆ ಇದೀಗ ಕಾಂಗ್ರೆಸ್ ಗೆ ತೀವ್ರ ಮುಜುಗರವನ್ನುಂಟುಮಾಡಿದೆ ಎಂದು ಹೇಳಬಹುದು. ರಫೆಲ್ ಯುದ್ಧ ವಿಮಾನ ಒಪ್ಪಂದವನ್ನು ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕೇಳಿಬಂದ ಬೋಫೋರ್ಸ್ ಹಗರಣಕ್ಕೆ ಹೋಲಿಸುವ ಮೂಲಕ ಅದರಲ್ಲಿ ಕೂಡ ಹಗರಣವಾಗಿದೆ ಎಂದು ಅವರೇ ಒಪ್ಪಿಕೊಂಡಂತಾಗಿದೆ. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ಬೋಫೋರ್ಸ್ ಹಗರಣ ನಡೆದಿತ್ತು ಎನ್ನಲಾಗಿದ್ದು ಅದರಲ್ಲಿ ರಾಜೀವ್ ಗಾಂಧಿಯವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. 1980 ಮತ್ತು 1990ರ ದಶಕದಲ್ಲಿ ಭಾರತ ಮತ್ತು ಸ್ವೀಡನ್ ಮಧ್ಯೆ ನಡೆದ ಒಪ್ಪಂದವಾಗಿತ್ತು. ಸ್ವೀಡನ್ ದೇಶದ ಶಸ್ತ್ರಾಸ್ತ್ರ ತಯಾರಿಕೆ ಕಂಪೆನಿ ಬೋಫೋರ್ಸ್ ಎಬಿ ಆಗಿದೆ.

ಮುಂದಿನ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಫೆಲ್ ಯುದ್ಧ ವಿಮಾನ ಒಪ್ಪಂದವನ್ನು ಪ್ರಮುಖ ರಾಜಕೀಯ ಅಜೆಂಡಾವಾಗಿ ಬಳಸಿಕೊಳ್ಳಬೇಕೆಂದು ಯೋಚಿಸುತ್ತಿದ್ದ ಕಾಂಗ್ರೆಸ್ ಗೆ ಇದರಿಂದ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ.

ಕಾಂಗ್ರೆಸ್ ನ ಮುಖವಾಣಿ ನ್ಯಾಶನಲ್ ಹೆರಾಲ್ಡ್ ನಲ್ಲಿ ಕೂಡ ಬೋಫೋರ್ಸ್ ಹಗರಣ ಮತ್ತು ರಫೆಲ್ ಯುದ್ಧ ವಿಮಾನವನ್ನು ಹೋಲಿಸಿದ್ದಕ್ಕಾಗಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

SCROLL FOR NEXT