ರಾಜಕೀಯ

ಹೈಕಮಾಂಡ್ ವಾರ್ನಿಂಗ್: ಸೋಮಶೇಕರ್ ಕರೆದಿದ್ದ ಸಮಾನ ಮನಸ್ಕರ ಸಭೆ ಮುಂದೂಡಿಕೆ

Raghavendra Adiga
ಬೆಂಗಳೂರು: ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಪ್ತರೂ ಆಗಿರುವ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿರುವ ಕಾರಣ ಮಂಗಳವಾರ ಕರೆದಿದ್ದ ಸಮಾನ ಮನಸ್ಕರ ಶಾಸಕರ ಸಭೆ ಹಠಾತ್ ಮುಂದೂಡಿಕೆಯಾಗಿದೆ. 
ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಉಪಚುನಾವಣೆ ನಾಮಪತ್ರ ಸಂದರ್ಭದಲ್ಲಿ ಪಕ್ಷದ ಹಲವು ಶಾಸಕರು ಹಾಜರಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಎಸ್.ಟಿ.ಸೋಮಶೇಖರ್ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.
ರಾಜಕೀಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಈ ಬಗ್ಗೆ ಪಕ್ಷದ ಶಾಸಕರು, ಮುಖಂಡರೆಲ್ಲಾ ಸೇರಿ ತೀರ್ಮಾನವನ್ನು ಕೈಗೊಳ್ಳಬೇಕು. ಸಮಾನ ಮನಸ್ಕರೆಲ್ಲ ಈ ಸಂಬಂಧ ಚರ್ಚಿಸಲು ಮಂಗಳವಾರ ಖಾಸಗಿ ಹೊಟೇಲ್‍ವೊಂದರಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಎಸ್‍.ಟಿ.ಸೋಮಶೇಖರ್ ಪಕ್ಷದ ಶಾಸಕರಿಗೆ, ನಿಗಮ ಮಂಡಳಿ ಅಧ್ಯಕ್ಷರಿಗೆ, ನಿಗಮ ಮಂಡಳಿ ವಂಚಿತ ಶಾಸಕರೂ ಸೇರಿದಂತೆ ಪಕ್ಷದ ಮುಖಂಡರಿಗೆ ಆಹ್ವಾನ ನೀಡಿದ್ದರು. ಸೋಮಶೇಖರ್ ಕರೆದ ಸಭೆ ಮೈತ್ರಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರ ಬಂಡಾಯದ ಮುನ್ಸೂಚನೆ ಎಂದು ವಿಶ್ಲೇಷಿಸಲಾಗಿದ್ದು, ಕಾಂಗ್ರೆಸ್-ಜೆಡಿಎಸ್‍ ಮೈತ್ರಿ ಪಕ್ಷದಲ್ಲಿ ಸಾಕಷ್ಟು ಚರ್ಚೆಗೆ ಇದು ಗ್ರಾಸವಾಗಿತ್ತು.
ಅಲ್ಲದೇ ಸಮಾನ ಮನಸ್ಕರ ಸಭೆಗೆ ಪಕ್ಷದಲ್ಲಿಯೇ ಭಿನ್ನಾಭಿಪ್ರಾಯ ಕೇಳಿಬಂದಿತ್ತು. ಮೇಲ್ಮನೆ ಸದಸ್ಯ ರಘು ಆಚಾರ್ ಸೇರಿದಂತೆ ಹಲವರು ಸಮಾನ ಮನಸ್ಕರ ಸಭೆ ಕರೆದಿರುವುದು ಸರಿಯಲ್ಲ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. 
ಪಕ್ಷದ ಹಿರಿಯ ನಾಯಕರನ್ನಾಗಲೀ, ಹೈಕಮಾಂಡ್ ಗಮನಕ್ಕಾಗಲಿ ಸಭೆ ನಡೆಸುವ ಬಗ್ಗೆ ಗಮನಕ್ಕೆ ತಂದಿಲ್ಲ, ಸಭೆ ನಡೆಸಲು ಅನುಮತಿ ಪಡೆದಿಲ್ಲ ಎಂದು ಕೆ.ಸಿ.ವೇಣುಗೋಪಾಲ್, ಎಸ್.ಟಿ.ಸೋಮಶೇಖರ್ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಏಕಾಏಕಿ ಸಭೆ ಕರೆದ ಉದ್ದೇಶವೇನು? ಪಕ್ಷದ  ಶಿಸ್ತನ್ನು ಮೀರಿದ ನಡವಳಿಕೆಯನ್ನು ಎಸ್.ಟಿ.ಸೋಮಶೇಖರ್ ಅನುಸರಿಸಿದ್ದು, ಉಪಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಶಾಸಕರ ನಡೆ ಖಂಡನೀಯ. ಪಕ್ಷ ವಿರೋಧಿ ಚಟುವಟಿಕೆ ನಡೆಸದಂತೆ ಸೋಮಶೇಖರ್ ಗೆ ತಿಳಿ ಹೇಳುವಂತೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸಿದ್ದರಾಮಯ್ಯ ಅವರಿಗೆ ನಿರ್ದೇಶಿಸಿದ್ದಾರೆ ಎನ್ನಲಾಗಿದೆ. 
ಅಲ್ಲದೇ ಚಿಂಚೋಳಿ, ಕುಂದಗೋಳ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಸಿದ್ದರಾಮಯ್ಯ ಸೇರಿದಂತೆ ಪಕ್ಷದ ನಾಯಕರು ಉಪಚುನಾವಣೆ ಕ್ಷೇತ್ರಗಳಲ್ಲಿ ಬೀಡುಬಿಟ್ಟಿದ್ದಾರೆ. 
ಕೆ.ಸಿ.ವೇಣಗೋಪಾಲ್ ನಿರ್ದೇಶನದನ್ವಯ ಸಿದ್ದರಾಮಯ್ಯ ತಮ್ಮ ಅಪ್ತ ಎಸ್.ಟಿ.ಸೋಮಶೇಖರ್‍ ಗೆ ಸಭೆ ಮುಂದೂಡುವಂತೆ ಸೂಚಿಸಿದ್ದಾರೆ.
SCROLL FOR NEXT