ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಒಂದು ವಾರದೊಳಗೆ ಸಚಿವ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ದಟ್ಟವಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನೀಡಿದ ಹೇಳಿಕೆ ಇಂತಹದೊಂದು ಸಾಧ್ಯತೆಗೆ ಪುಷ್ಠಿ ನೀಡಿದೆ.
ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್ ಸೇರಿದರೆ ಸಚಿವ ಸ್ಥಾನ ನೀಡುವುದಾಗಿ ಆಹ್ವಾನ ನೀಡಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ನಗರದಲ್ಲಿ ಉತ್ತರಿಸಿದ ವಿಶ‍್ವನಾಥ್, ಮೈತ್ರಿ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ರಮೇಶ್ ಜಾರಕಿಹೊಳಿ ಅವರ ಮನೆಯಲ್ಲಿರುವ ಗೊಂದಲವನ್ನು ರಾಜ್ಯಕ್ಕೆ ಹಂಚುತ್ತಿದ್ದಾರೆ ಎಂದರು.
ಮೇ 23 ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಮುಖ್ಯಮಂತ್ರಿಗಳು ಜೆಡಿಎಸ್ ಸೇರುವಂತೆ ಆಹ್ವಾನ ನೀಡಿರುವ ಬಗ್ಗೆ ತಮಗೆ ಗೊತ್ತಿಲ್ಲ. ಫಲಿತಾಂಶ ಬಂದ ಒಂದು ವಾರದ ಬಳಿಕ ಸಂಪುಟ ವಿಸ್ತರಣೆ ಆಗಬಹುದು. ಆ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಅವರ ವಿಚಾರವೂ ಚರ್ಚೆಯಾಗುವ ಸಾಧ್ಯತೆ ಇರಬಹುದು ಎಂದರು.
ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಂಪುಟ ವಿಸ್ತರಣೆ ವಿಚಾರ ಮುನ್ನೆಲೆಗೆ ಬರಲಾರಂಭಿಸಿದೆ. ಜೆಡಿಎಸ್‍ನಲ್ಲಿ 2 ಸಚಿವ ಸ್ಥಾನಗಳು ಖಾಲಿ ಇದ್ದು, ಸಂಪುಟ ವಿಸ್ತರಣೆ ಸುಮಾರು 7-8 ತಿಂಗಳಿನಿಂದ ನನೆಗುದಿಗೆ ಬಿದ್ದಿದೆ. ಅಲ್ಲದೇ ಚುನಾವಣಾ ನೀತಿ ಸಂಹಿತೆ ಜಾರಿಯ ಕೆಲ ದಿನಗಳ ಮೊದಲುಷ್ಟೆ 8 ನಿಗಮ ಮಂಡಳಿಗಳಿಗೆ ಅಧ್ಯಕ್ಷಗಾದಿ ಹಂಚಿಕೆ ಮಾಡಲಾಗಿದ್ದು, ಜೆಡಿಎಸ್ ಕೋಟಾದಲ್ಲಿ ಇನ್ನೂ ಸ್ಥಾನಗಳು ಖಾಲಿ ಉಳಿದಿವೆ.
ಭಾನುವಾರ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಕುಮಾರಸ್ವಾಮಿ, ಚುನಾವಣಾ ಫಲಿತಾಂಶ ಬಂದ ನಂತರ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕ ಮಾಡುವುದಾಗಿ ಭರವಸೆ ನೀಡಿರುವುದು ಪಕ್ಷದ ಶಾಸಕರು ಮತ್ತು ಮುಖಂಡರಲ್ಲಿ ಮತ್ತೆ ಅಧಿಕಾರದ ಕನವರಿಕೆ ಚಿಗುರುವಂತೆ ಮಾಡಿದೆ.
ಮೇ 23ಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಅಧಿಕಾರ ಹಂಚಿಕೆಯಲ್ಲಿ ವಿಳಂಬ ಮಾಡುವುದಿಲ್ಲ. ಸಾಧ್ಯವಾದಷ್ಟು ಪಕ್ಷದ ಮುಖಂಡರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ಕಲ್ಪಿಸಲಾಗುವುದು. ಸೂಕ್ತರನ್ನು ಶಿಫಾರಸು ಮಾಡುವಂತೆ ಅವರು ಪಕ್ಷದ ಶಾಸಕರಿಗೆ ಹೇಳಿದ್ದಾರೆ. ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳ ನೇಮಕವನ್ನೂ ಮಾಡಿ ಪಕ್ಷ ಸಂಘಟಿಸುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos