ರಾಜಕೀಯ

ರೆಬೆಲ್ಸ್ ಗೆ ಟ್ರಬಲ್: ಉಪಚುನಾವಣೆಗೆ ಉಸ್ತುವಾರಿ ನೇಮಿಸಿದ ಕಾಂಗ್ರೆಸ್

Srinivasamurthy VN
ಬೆಂಗಳೂರು: ರೆಬೆಲ್ ಶಾಸಕರ ಅನರ್ಹತೆಯಿಂದೆ ತೆರವಾಗಿರುವ 17 ವಿಧಾನಸಭಾ ಕ್ಷೇತ್ರಗಳಿಗೆ ಎದುರಾಗಲಿರುವ ವಿಧಾನಸಭೆ ಉಪಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಇದೇ ಕಾರಣಕ್ಕೆ ಎಲ್ಲ 17 ಕ್ಷೇತ್ರಗಳಿಗೂ ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಹಾಗೂ ಅನರ್ಹರಿಗೆ ತಕ್ಕಪಾಠ ಕಲಿಸಲು ಪಣತೊಟ್ಟಿರುವ ರಾಜ್ಯ ಕಾಂಗ್ರೆಸ್ ಬಹುತೇಕ ಜಾತಿ, ಪ್ರಾದೇಶಿಕ, ಗೆಲ್ಲುವ ತಂತ್ರಗಾರಿಕೆ ಆಧಾರದ ಮೇಲೆ ಉಸ್ತುವಾರಿಗಳ ತಂಡ ರಚಿಸಿದೆ. ಶಾಸಕರ ಅನರ್ಹತೆಯಿಂದ ತೆರವಾಗಿರುವ 17 ವಿಧಾನಸಭಾ ಕ್ಷೇತ್ರಗಳಿಗೆ ಎದುರಾಗಲಿರುವ ವಿಧಾನಸಭೆ ಉಪಚುನಾವಣೆಗೆ ಕೆಪಿಸಿಸಿ 17 ಉಸ್ತುವಾರಿಗಳನ್ನು ನೇಮಿಸಿದೆ.
ಈ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು, ಪಕ್ಷ ಸಂಘಟನೆ, ಅನರ್ಹರು ಪಕ್ಷಕ್ಕೆ ಎಸಗಿರುವ ದ್ರೋಹದ ಬಗ್ಗೆ ಕ್ಷೇತ್ರದಲ್ಲಿ ಸಂದೇಶ ಸಾರುವ ಮೂಲಕ ಮತದಾರರನ್ನು ಸೆಳೆಯುವಂತೆ ಮಾಡುವುದು ಸೇರಿದಂತೆ ಇತರೆ ಹತ್ತು ಹಲವು ಮಹತ್ತರ ಜವಾಬ್ದಾರಿಯನ್ನು ಉಸ್ತುವಾರಿಗಳಿಗೆ ಕೆಪಿಸಿಸಿ ವಹಿಸಿದೆ.
ಯಾವ ಕ್ಷೇತ್ರಕ್ಕೆ ಯಾರು ಉಸ್ತುವಾರಿ?
ರಾಜರಾಜೇಶ್ವರಿ ನಗರ- ಡಿ. ಕೆ ಸುರೇಶ್, ಕೆಆರ್ ಪುರಂ -ಕೆ.ಜೆ.ಜಾರ್ಜ್ ಯಶವಂತಪುರ - ಎಂ ಕೃಷ್ಣಪ್ಪ ಜಮೀರ್, ಮಹಾಲಕ್ಷ್ಮಿ ಲೇಔಟ್ -  ಮಾಗಡಿ ಬಾಲಕೃಷ್ಣ, ನಜೀರ್ ಅಹಮದ್. ಕೆಆರ್ ಪೇಟೆ-  ಚೆಲುವರಾಯಸ್ವಾಮಿ, ಹುಣಸೂರು- ಡಾ ಎಚ್.ಸಿ. ಮಹಾದೇವಪ್ಪ, ರಾಣೇಬೆನ್ನೂರು- ಎಚ್ ಎಂ ರೇವಣ್ಣ, ಹಿರೇಕೆರೂರು- ಎಚ್ ಕೆ ಪಾಟೀಲ್, ಅಥಣಿ- ಎಂಬಿ ಪಾಟೀಲ್. ಕಾಗವಾಡ- ಸತೀಶ್ ಜಾರಕಿಹೊಳಿ. ಗೋಕಾಕ್ -ಶಿವಾನಂದ ಪಾಟೀಲ್, ಮಸ್ಕಿ- ಈಶ್ವರ ಖಂಡ್ರೆ, ಹೊಸಕೋಟೆ -ಕೃಷ್ಣ ಭೈರೇಗೌಡ, ಹೊಸಪೇಟೆ- ವಿ.ಎಸ್.ಉಗ್ರಪ್ಪ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. 
ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, 'ಪ್ರತಿ ಕ್ಷೇತ್ರಕ್ಕೂ ಒಂದೊಂದು ತಂಡ ರಚನೆ ಮಾಡಲಿದ್ದೇವೆ. ಪಕ್ಷದ ಹಿರಿಯ ಮುಖಂಡರೊಬ್ಬರನ್ನು ಆ ಕ್ಷೇತ್ರದ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗುತ್ತದೆ. ಉಸ್ತುವಾರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ, ಪಕ್ಷ ಸಂಘಟನೆ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಲಿದ್ದಾರೆ. ಉಪಚುನಾವಣೆಗೆ ಕ್ಷೇತ್ರದಲ್ಲಿ ಅಗತ್ಯ ತಯಾರಿ ನಡೆಸಲಿದ್ದಾರೆ  ಎಂದು ಹೇಳಿದರು.
ಅಂತೆಯೇ ದೇಶದಲ್ಲಿ ಭಯದ ವಾತಾವರಣ ನಿರ್ಮಿಸಿರುವ ಕೋಮುವಾದಿ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸುವುದೇ ನಮ್ಮ ಗುರಿ. ಬಿಜೆಪಿ ಅಧಿಕಾರದ ದುರ್ಬಳಕೆ ಮೂಲಕ ರಾಜಕೀಯ ವಿರೋಧಿಗಳನ್ನು ಬೆದರಿಸುತ್ತಿದೆ. ಭಾವನಾತ್ಮಕ ವಿಚಾರಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದು, ಇದರಿಂದ ಸಮಾಜವನ್ನು ರಕ್ಷಿಸುವ ಹೊಣೆ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ಹೇಳಿದರು.
ಇದೇ ವೇಳೆ ರೆಬೆಲ್ ಶಾಸಕರಿಗೂ ಬಿಸಿ ಮುಟ್ಟಿಸುವ ಕಾರ್ಯಕ್ಕೆ ಕೆಪಿಸಿಸಿ ಮುಂದಾಗಿದ್ದು, 'ಅನರ್ಹ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಆ ಕ್ಷೇತ್ರಗಳ ಬ್ಲಾಕ್ ಸಮಿತಿಗಳನ್ನು ವಿಸರ್ಜಿಸಿ, ಅಧ್ಯಕ್ಷರನ್ನು ವಜಾಗೊಳಿಸಲಾಗಿದೆ. ಹಾಗಾಗಿ ಕಾಂಗ್ರೆಸ್ ಸದಸ್ಯರು, ಕಾರ್ಯಕರ್ತರು ಅನರ್ಹರ ಜೊತೆ ಹೋಗಬಾರದು. ಪಕ್ಷದ ವಿಶ್ವಾಸಕ್ಕೆ ದ್ರೋಹ ಬಗೆದವರೊಂದಿಗೆ ಗುರುತಿಸಿಕೊಳ್ಳಬಾರದು ಎಂದೂ ಎಚ್ಚರಿಕೆ ನೀಡಿದ್ದಾರೆ.
SCROLL FOR NEXT