ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ 14 ತಿಂಗಳು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನ ಜೀತದಾಳುವಿನಂತೆ ದುಡಿದಿದ್ದೇನೆ ಎಂದು ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ನನ್ನ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಎಲ್ಲಾ ಶಾಸಕರಿಗೆ ಮತ್ತು ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆ. 14 ತಿಂಗಳು ಈ ಶಾಸಕರುಗಳ ಮತ್ತು ಮೈತ್ರಿಪಕ್ಷ ಕಾಂಗ್ರೆಸ್ ನ ಜೀತದಾಳುವಿನಂತೆ ಕೆಲಸ ಮಾಡಿದ್ದೆ. ಹೀಗಿರುವಾಗ ಅವರು ನನ್ನ ಮೇಲೆ ಏಕೆ ಆರೋಪ ಹೊರಿಸುತ್ತಾರೆ ಎಂದು ಗೊತ್ತಾಗುತ್ತಿಲ್ಲ, ಸರ್ಕಾರ ಪತನಕ್ಕೆ ಎಲ್ಲರೂ ನನ್ನತ್ತಲೇ ಬೊಟ್ಟು ಮಾಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
14 ತಿಂಗಳ ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸಲಾಗದೆ ಸೋತು ಪತನವಾಯಿತು. ನಂತರ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಕಳೆದ ಜುಲೈ 26ರಂದು ಬಿ ಎಸ್ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡರು.
ಹಲವು ಕಾಂಗ್ರೆಸ್ ನಾಯಕರು ಮೈತ್ರಿ ಸರ್ಕಾರ ರಚಿಸುವ ಒಲವು ಹೊಂದಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಯಾವುದೇ ಪಕ್ಷಕ್ಕೆ ಸಿಗದ ಕಾರಣ ಅಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಮುಕ್ತವಾಗಿ ತುಂಬುಮನಸ್ಸಿನಿಂದ ಜೆಡಿಎಸ್ ಜೊತೆ ಕೈಜೋಡಿಸಿ ಸರ್ಕಾರ ರಚನೆಗೆ ಮುಂದಾಯಿತು. ಆದರೆ ನನಗೆ ತಿಳಿದಿರುವ ಪ್ರಕಾರ ಕೆಲ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಈ ಮೈತ್ರಿ ಇಷ್ಟವಿರಲಿಲ್ಲ ಎಂದರು ಕುಮಾರಸ್ವಾಮಿ.
ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿಂದ ಕಾಂಗ್ರೆಸ್ ನಾಯಕರ ಒಂದು ಗುಂಪು ಸಾರ್ವಜನಿಕವಾಗಿ ಹೇಗೆ ವರ್ತಿಸಿದೆ ಮತ್ತು ಪ್ರತಿಕ್ರಿಯೆ ನೀಡುತ್ತಿತ್ತು ಎಂದು ಎಲ್ಲರಿಗೂ ಗೊತ್ತಿದೆ. ನಿಜ ಹೇಳಬೇಕೆಂದರೆ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಕೆಲಸಗಳಿಗೆ ಜೆಡಿಎಸ್ ಶಾಸಕರ ಕ್ಷೇತ್ರಗಳಿಗಿಂತ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿತ್ತು ಎಂದು ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ನೊಂದಿಗೆ ಸರ್ಕಾರ ರಚಿಸಲು ಜೆಡಿಎಸ್ ಶಾಸಕರ ವಿರೋಧವೂ ಇತ್ತು. ಮುಂದೊಂದು ದಿನ ಕಾಂಗ್ರೆಸ್ನವರು ಬೆನ್ನಿಗೆ ಚೂರಿ ಇರಿಯುತ್ತಾರೆ ಎಂದು ಎಚ್ಚರಿಸಿದ್ದರು. ಇವರ ವಿರೋಧವನ್ನು ಲೆಕ್ಕಿಸದೆ ನಾನು ಕಾಂಗ್ರೆಸ್ನೊಂದಿಗೆ ಸರ್ಕಾರ ರಚಿಸಿದೆ. ಈಗ ಅದಕ್ಕಾಗಿ ಪರಿತಪಿಸುತ್ತಿರುವೆ ಎಂದು ಕುಮಾರಸ್ವಾಮಿ ಹೇಳಿದರು.
ಸಿಎಂ ಪದವಿಗೆ ರಾಜೀನಾಮೆ ಕೊಟ್ಟ ಬಳಿಕ ಬಹುದೊಡ್ಡ ಭಾರವೊಂದು ಇಳಿದಂತಾಗಿದೆ. ತುಂಬಾ ಆರಾಮವಾಗಿದ್ದೇನೆ. 14 ತಿಂಗಳು ನಾನು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದೆ. ಈ ಅವಧಿಯಲ್ಲಿ ನಾನು ಮಾಡಿದ ಒಳ್ಳೆಯ ಕೆಲಸಗಳನ್ನು ಯಾರೊಬ್ಬರೂ ಗುರುತಿಸಲಿಲ್ಲ ಎಂಬ ನೋವು ನನಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭವಿಷ್ಯದಲ್ಲಿ ಕೂಡ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಬೇಡ ಎಂಬುದು ಜೆಡಿಎಸ್ ಶಾಸಕರಲ್ಲಿ ಅನೇಕರ ಅಭಿಪ್ರಾಯವಾಗಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಈಗಲೂ ನಮಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ. ಮುಂದೆ ಏನಾಗುತ್ತದೋ ನೋಡೋಣ ಎಂದಷ್ಟೇ ಮುಂದಿನ ರಾಜಕೀಯ ಸನ್ನಿವೇಶಗಳ ಬಗ್ಗೆ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos