ಬೆಂಗಳೂರು: ರಾಜ್ಯದಲ್ಲಿ ಯಾವ ಕ್ಷಣದಲ್ಲಾದರೂ ಮಧ್ಯಂತರ ಚುನಾವಣೆ ಎದುರಾಗಬಹುದು ಅದಕ್ಕೆ ನೀವೆಲ್ಲಾ ಸಿದ್ದರಾಗಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಬುಧವಾರ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಇಂದು ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಂಘಟನಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ಸಂದರ್ಭದಲ್ಲಿ ಬೇಕಾದರೂ ಮಧ್ಯಂತರ ಚುನಾವಣೆ ಎದುರಾಗಬಹುದು. ಅದಕ್ಕೆ ನೀವೆಲ್ಲಾ ಈಗಿನಿಂದಲೇ ಸಿದ್ದರಾಗಿ. ಸದ್ಯದಲ್ಲೇ ಪಕ್ಷದ ನಾಯಕರ ಸಭೆ ನಡೆಸಿ ಎಲ್ಲೆಲ್ಲಿ ಪದಾಧಿಕಾರಿಗಳ ಬದಲಾವಣೆ ಮಾಡಬೇಕು ಎಂಬುದನ್ನು ಪರಿಶೀಲಿಸಿ ಅರ್ಹರಿಗೆ ಜವಾಬ್ದಾರಿ ನೀಡಲಾಗುವುದು ಎಂದರು.
ಸಮ್ಮಿಶ್ರ ಸರ್ಕಾರ ರಚನೆಗೆ ತಾವು ಬೆಂಬಲ ನೀಡಿದ್ದು ತಾವು ಮಾಡಿದ ದೊಡ್ಡ ತಪ್ಪು. ಸರ್ಕಾರ ರಚನೆ ಮಾಡಿದ್ದನ್ನು ಕಾರ್ಯಕರ್ತರು ವಿರೋಧಿಸಿದ್ದರು. ಕಾರ್ಯಕರ್ತರ ಅಭಿಪ್ರಾಯಗಳಿಗೆ ವಿರುದ್ಧವಾಗಿ ಹೋಗಿ ನಾನು ತಪ್ಪು ಮಾಡಿದ್ದೇನೆ ಎಂದು ದೇವೇಗೌಡರು ತಪ್ಪೊಪ್ಪಿಕೊಂಡರು.
ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ಸ್ಪರ್ಧಿಸಿ ಸೋತಿರುವುದು ಒಳ್ಳೆಯದೆ ಆಗಿದೆ. ತಮ್ಮನ್ನು ಸೋಲಿಸಿದ ಪುಣ್ಮಾತ್ಮರು ಚೆನ್ನಾಗಿರಲಿ. ಅವರಿಗೆ ನಾನು ಕೇಡು ಬಯಸುವುದಿಲ್ಲ, ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟೋಣ, ಪಕ್ಷ ಉಳಿಸೋಣ, ಬೆಳೆಸೋಣ, ಪಕ್ಷವನ್ನು ಉಳಿಸಬೇಕಿದ್ದರೆ ಆ ಶಕ್ತಿಯನ್ನು ನೀವೇ ನಮಗೆ ನೀಡಬೆಕೆಂದು ಕೈಚಾಚಿ ಬೇಡಿಕೊಳ್ಳುತ್ತೇನೆ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಪಕ್ಷವನ್ನು ಯಾರು ಬಿಟ್ಟು ಹೋದರು, ಏಕೆ ಹೋದರು ಎಂಬ ಬಗ್ಗೆ ಚರ್ಚೆ ಬೇಕಾಗಿಲ್ಲ. ಪಕ್ಷದಲ್ಲಿ ಉಳಿದಿರುವವರ ಬಗ್ಗೆಯೂ ಚರ್ಚೆ ಮಾಡುವುದಿಲ್ಲ. ಜೆಡಿಎಸ್ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದು, ಅಧಿಕಾರದಿಂದ ಹೊರಬಂದ ಮೇಲೆ ಎಲ್ಲವನ್ನೂ ಗಮನಿಸಿದ್ದೇನೆ. ಬೆಂಗಳೂರು ನಗರದ ಮೂರು ಕ್ಷೇತ್ರಗಳ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದೆ ಎದುರಾಗಲಿರುವ ವಿಧಾನಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಹೇಳಿದರು. ಅಲ್ಲದೆ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂಬ ಸಂದೇಶವನ್ನು ಸಹ ರವಾನಿಸಿದರು.
ರಾಜ್ಯದ ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಎದುರಾಗಿದ್ದು, ಅಂತೆಯೇ ಮಲೆನಾಡಿನ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ತೀವ್ರ ಸಮಸ್ಯೆ ಎದುರಾಗಿದೆ. ಭೀಕರ ಮಳೆ ನಡುವೆಯೂ ಎಲ್ಲಾ ಜಿಲ್ಲೆಗಳಿಂದ ಪಕ್ಷ ಉಳಿಸಲು ಸಮಾವೇಶಕ್ಕೆ ಕಾರ್ಯಕರ್ತರು ಆಗಮಿಸಿರುವುದು ತಮಗೆ ಸಂತಸ ತಂದಿದೆ. ನೀವೆಲ್ಲಾ ಸೇರಿ ಪಕ್ಷ ಉಳಿಸಿ ಬೆಳೆಸುವ ನಂಬಿಕೆ ತಮಗಿದ್ದು, ಪಕ್ಷದಲ್ಲಿ ಮಾಜಿ ಸಚಿವರು, ಹಾಲಿ ಶಾಸಕರು ಎಲ್ಲಾ ಸಮಾಜದವರು ಜಾತ್ಯತೀತ ಪಕ್ಷಕ್ಕೆ ಶಕ್ತಿ ನೀಡಿದ ನಾಯಕರು, ನಾಯಕಿಯರು ಇದ್ದಾರೆ. ಅವರಲ್ಲೆರ ಪರಿಶ್ರಮದಿಂದ ಪಕ್ಷ ಮತ್ತೆ ಸಂಘಟಿಸೋಣ ಎಂದು ಕರೆ ನೀಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos