ರಾಜಕೀಯ

ಇದೇನಾ ನಿಮ್ಮ ಜನಮೆಚ್ಚಿನ ಆಡಳಿತ ಮರ್ಯಾದಾ ಪುರುಷೋತ್ತಮರೇ?: ಜೆಡಿಎಸ್ ವ್ಯಂಗ್ಯ

Shilpa D
ಬೆಂಗಳೂರು: ರಾಜ್ಯದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ಸಂಕಷ್ಟದಲ್ಲಿರುವಾಗ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿ ಪ್ರವಾಸ ಕೈಗೊಂಡು ಜನಹಿತ ಮರೆತಿದ್ದಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಟೀಕಿಸಿದೆ.
ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಅತಿವೃಷ್ಟಿಯಿಂದ ಜನರು ನರಳುತ್ತಿದ್ದಾರೆ. ಇದುವರೆಗೂ ಸರ್ಕಾರ ಗಂಜಿ ಕೇಂದ್ರಗಳನ್ನು ಸ್ಥಾಪಿಸಿಲ್ಲ, ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಿಲ್ಲ. ಮುಖ್ಯಮಂತ್ರಿ ಇಲ್ಲ, ಮಂತ್ರಿಗಳೂ ಇಲ್ಲ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ಕೋರಲಾಗಿದೆ ಎಂದು ಜೆಡಿಎಸ್ ಟ್ವಿಟ್ ಮಾಡಿದೆ.
ರೋಮ್ ಹೊತ್ತಿ ಉರಿಯುವಾಗ  ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ, ಹಾಗೆಯೇ ಉತ್ತರ ಕರ್ನಾಟಕ ಭಾರೀ ಮಳೆಯಿಂದ ಜರ್ಜರಿತವಾಗಿರುವಾಗ ಯಡಿಯೂರಪ್ಪನವರು ದೆಹಲಿಗೆ ಹೋಗಿ ಕುಳಿತಿದ್ದಾರೆ. ಕರ್ನಾಟಕದಲ್ಲಿ ‌ಸಮಸ್ಯೆ ಹೇಳಿಕೊಳ್ಳಲು ಮಂತ್ರಿಮಂಡಲವೂ ಇಲ್ಲ. ಇದೇನಾ ನಿಮ್ಮ ಜನಮೆಚ್ಚಿನ ಆಡಳಿತ ಮರ್ಯಾದಾ ಪುರುಷೋತ್ತಮರೇ.. ಎಂದು ಜೆಡಿಎಸ್ ಮತ್ತೊಂದು ಟ್ವೀಟ್ ನಲ್ಲಿ ಕುಟುಕಿದೆ.
ಕರ್ನಾಟಕ ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲೂ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗಿದ್ದು, ಕರ್ನಾಟಕ ನೀರಿನಲ್ಲಿ ಮುಳುಗಿದೆ. ಮತದಾರರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಬಿಜೆಪಿ, ಆರ್ ಎಸ್ ಎಸ್ ನವರು ಅಧಿಕಾರ ಹಂಚಿಕೆಯ ಕಿತ್ತಾಟದಲ್ಲಿ ಮುಳುಗುದ್ದಾರೆ ಎಂದು ಟೀಕಿಸಿದೆ.ಮಾಧ್ಯಮದವರು ಕಾಶ್ಮೀರದಲ್ಲಿ ಮುಳುಗಿದ್ದಾರೆ. ಏಕವ್ಯಕ್ತಿಯ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾಯುತ್ತಿರಿ, ರಾಜ್ಯ ಸರ್ಕಾರ ಶವವಾಗಿ ತೇಲಲಿದೆ ಎಂದು ಟ್ವೀಟರ್ ನಲ್ಲಿ ಕಾಂಗ್ರೆಸ್ ಹೇಳಿದೆ.
SCROLL FOR NEXT