ರಾಜಕೀಯ

10 ಕೋಟಿ ಕೊಟ್ಟವರ ಹೆಸರು ಗ್ರಾಮಕ್ಕೆ: ಕರ್ನಾಟಕವನ್ನು ಮಾರಾಟಕ್ಕಿಡಬೇಡಿ ಎಂದ ಜೆಡಿಎಸ್

Lingaraj Badiger

ಬೆಂಗಳೂರು: ಪ್ರವಾಹ ಪೀಡಿತ ಗ್ರಾಮಗಳ ಪುನಶ್ಚೇತನಕ್ಕಾಗಿ 10 ಕೋಟಿಗಿಂತ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನೇ ಆ ಗ್ರಾಮಗಳಿಗೆ ನಾಮಕರಣ ಮಾಡುವ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ನಿರ್ಧಾರಕ್ಕೆ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಯಡಿಯೂರಪ್ಪ ಅವರ ಪ್ರಸ್ತಾವವನ್ನು ತೀವ್ರವಾಗಿ ಖಂಡಿಸಿರುವ ಜೆಡಿಎಸ್​ ಇದೊಂದು ತುಘಲಕ್​ ನಿರ್ಧಾರವಾಗಿದ್ದು, ಕರ್ನಾಟಕವನ್ನು ಮಾರಾಟಕ್ಕೆ ಇಡಬೇಡಿ ಎಂದು ಒತ್ತಾಯಿಸಿದೆ.

ಬುಧವಾರ ವಿಧಾನಸೌಧದಲ್ಲಿ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿದ್ದ ಸಿಎಂ ಯಡಿಯೂರಪ್ಪ, ಪ್ರವಾಹದಿಂದಾಗಿ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಅವರ ನೆರವಿಗೆ ಉದ್ಯಮಿಗಳು ಮುಂದಾಗಬೇಕು. ಗ್ರಾಮಗಳ ಪುನಶ್ಚೇತನಕ್ಕೆ 10 ಕೋಟಿಗಿಂತ ಅಧಿಕ ದೇಣಿಗೆ ನೀಡಿದರೆ ಅವರ ಕಂಪನಿಯ ಹೆಸರನ್ನು ಆ ಗ್ರಾಮಗಳಿಗೆ ನಾಮಕರಣ ಮಾಡುವುದಾಗಿ ಹೇಳಿದ್ದರು. 

ಈ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡಿರುವ ಜೆಡಿಎಸ್, ಸಿಎಂ ನಿರ್ಧಾರ ತುಘಲಕ್​ ನಿರ್ಧಾರದಂತಿದೆ. ನಮ್ಮ ರಾಜ್ಯದ ಪ್ರತೀ ಗ್ರಾಮದ ಹೆಸರಿಗೂ ಅದರದ್ದೇ ಆದ ಹಿನ್ನೆಲೆಯಿದೆ. ನೆರೆಯಿಂದ ಎಲ್ಲವನ್ನೂ ಕಳೆದುಕೊಂಡಿರುವರಿಗೆ ತಮ್ಮ ಗ್ರಾಮದ ಹೆಸರನ್ನೂ ಕಳೆದುಕೊಳ್ಳುವಂತೆ ಮಾಡಬೇಡಿ. ಕರ್ನಾಟಕವನ್ನು ಮಾರಾಟಕ್ಕೆ ಇಡಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

SCROLL FOR NEXT