ರಾಜಕೀಯ

ದೂರವಾಣಿ ಕದ್ದಾಲಿಕೆ ಪ್ರಕರಣ ಸಿಬಿಐ ತನಿಖೆ ಸ್ವಾಗತಾರ್ಹ- ಸದಾನಂದಗೌಡ,ವಿಶ್ವನಾಥ್ 

Nagaraja AB

ಬೆಂಗಳೂರು: ಟೆಲಿಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವ ರಾಜ್ಯಸರ್ಕಾರದ ನಿರ್ಧಾರವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಹಾಗೂ ಜೆಡಿಎಸ್ ಅನರ್ಹ ಶಾಸಕ ಎಚ್. ವಿಶ್ವನಾಥ್ ಸ್ವಾಗತಿಸಿದ್ದಾರೆ.

ಈ ಪ್ರಕರಣವನ್ನು ಸಿಬಿಐಗೆ ವಹಿಸಿರುವ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಾರ್ಹ. ಪೋನ್ ಕದ್ದಾಲಿಕೆ ಅಕ್ಷಮ್ಯ ಅಪರಾಧ. ಇದರಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ಇದರಲ್ಲಿ ಸೇಡಿನ ರಾಜಕಾರಣದ  ಪ್ರಶ್ನೆಯೇ ಇಲ್ಲ ಎಂದು ಸದಾನಂದಗೌಡ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಸಹ ಸೂಕ್ತ ತನಿಖೆಗೆ  ಒತ್ತಾಯಿಸಿದ್ದರು. ಇದೊಂದು ಗಂಭೀರ ಪ್ರಕರಣವಾಗಿರುವ ಕಾರಣ ಸಿಬಿಐ ತನಿಖೆಯಿಂದ ಮಾತ್ರ  ಸತ್ಯಾಂಶ ಹೊರಬರಲಿದೆ ಎಂದಿದ್ದಾರೆ.

ಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿರುವುದರಿಂದ ಸಂತಸವಾಗಿದೆ ಎಂದು ವಿಶ್ವನಾಥ್ ಹೇಳಿದ್ದಾರೆ.  ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ  ಟೆಲಿಪೋನ್ ಕದ್ದಾಲಿಕೆಯ ನೀಚ ಕೆಲಸ ಮಾಡಿದ್ದಾರೆ. ಪೋನ್ ಟ್ಯಾಪಿಂಗ್  ಮಾಡಿ ಬೆದರಿಕೆಯನ್ನುಂಟು ಮಾಡುವ ಕೆಲಸ ಮಾಡಿದ್ದರು. ಭಯೋತ್ಪಾದಕರಿಗೂ ಇಂತಹವರಿಗೂ ಏನು ವ್ಯತ್ಯಾಸವಿದೆ. ಇವರೂ  ಒಂದು ರೀತಿಯ ಭಯೋತ್ಪಾದಕರಿದ್ದಂತೆ ಎಂದು ಕಿಡಿಕಾರಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದ ವೇಳೆ ನಮ್ಮ ಪಕ್ಷದ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ, ಪೋನ್ ಕದ್ದಾಲಿಸುವ ನೀಚ ಕೆಲಸ ಮಾಡಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. 

SCROLL FOR NEXT