ರಾಜಕೀಯ

ಉಪಮುಖ್ಯಮಂತ್ರಿ ಹುದ್ದೆ ಅಸಂವಿಧಾನಿಕ ಹುದ್ದೆ : ಸಚಿವ ಜಗದೀಶ್ ಶೆಟ್ಟರ್ 

Nagaraja AB

ಹುಬ್ಬಳ್ಳಿ:  ಉಪ ಮುಖ್ಯಮಂತ್ರಿ ಸ್ಥಾನ ಎನ್ನುವುದು ಅಸಾಂವಿಧಾನಿಕ ಹುದ್ದೆ , ಅದಕ್ಕೆ  ಸಂವಿಧಾನದಲ್ಲಿ ಮಾನ್ಯತೆ ಇಲ್ಲ, ಕೇವಲ ಗೌರವ ನೀಡುವ ಉದ್ದೇಶದಿಂದ ಸೃಷ್ಟಿಯಾಗಿರುವ ಹುದ್ದೆ  ಹೀಗಾಗಿ ತಮಗೆ  ಉಪ ಮುಖ್ಯಮಂತ್ರಿ ಹುದ್ದೆ  ಕೊಟ್ಟಿದ್ದರೂ ತೆಗೆದುಕೊಳ್ಳುತ್ತಿರಲಿಲ್ಲ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ, ಭೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಉಪಮುಖ್ಯಮಂತ್ರಿ ಹುದ್ದಗೆ ಕಿಮ್ಮತ್ತಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ವರಿಷ್ಠರು ತೆಗೆದುಕೊಂಡ  ನಿರ್ಧಾರದಂತೆ ನಡೆದುಕೊಳ್ಳುತ್ತೇವೆ. ನಮ್ಮ ಪಕ್ಷದಲ್ಲಿ ಭಿನ್ನಮತ ಇಲ್ಲ. ಏನೇ ಗೊಂದಲಗಳಿದ್ದರೂ ಮೂರು ನಾಲ್ಕು ದಿನಗಳಲ್ಲಿ ಎಲ್ಲ ವೂ ಸರಿಯಾಗಲಿದೆ ಎಂದರು. 

ಖಾತೆಗಳ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಸಿ.ಟಿ.ರವಿ ಅವರಿಗೆ ಖಾತೆ ಬಗ್ಗೆ ಬೇಸರವಾಗಿದ್ದರೆ ತಾವು ಅವರ ಜತೆ ತಾವು ಖುದ್ದಾಗಿ ಮಾತಾಡುವುದಾಗಿ ಶೆಟ್ಟರ್ ಹೇಳಿದರು. 

ಮೈತ್ರಿ ಸರ್ಕಾರದ ವಿಚಾರದಲ್ಲಿ ನಾವು ಹೇಳಿದ್ದೆಲ್ಲ ಸತ್ಯವಾಗಿದೆ. ಅದು  ಅನೈತಿಕ ಮೈತ್ರಿಯಾಗಿದ್ದ ಕಾರಣ ಸರ್ಕಾರ ಪತನವಾಯಿತು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಹಾಗೂ ಯಡಿಯೂರಪ್ಪ ಅವರ ಮೇಲೆ ಯಾಕೆ  ಇಷ್ಟೊಂದು ಪ್ರೀತಿ ಹುಟ್ಟಿದೆ ಎಂದು ಅರ್ಥವಾಗುತ್ತಿಲ್ಲ. ಮೊದಲು ಅವರ ಪಕ್ಷ  ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ  ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಲ್ಲೇ ಸ್ಪರ್ಧೆ ಏರ್ಪಟ್ಟಿದೆ. ಹೀಗಿರುವಾಗ  ಇನ್ನೊಂದು ಪಕ್ಷದ ಮೇಲೆ, ನಾಯಕರ ಮೇಲೆ ಅನುಕಂಪ ತೋರುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಸಚಿವ ಜಗದೀಶ್ ಶೆಟ್ಟರ್ ಕಟುಕಿದರು.

SCROLL FOR NEXT