ಬೆಂಗಳೂರು: 17 ಶಾಸಕರ ರಾಜಿನಾಮೆಯಿಂದ ತೆರವಾಗಿರುವ ಕ್ಷೇತ್ರಗಳ ಉಪ ಚುನಾವಣೆಗೆ ಆಯೋಗ ಇನ್ನೂ ದಿನಾಂಕ ಪ್ರಕಟಿಸಿಲ್ಲ, ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಉಪ ಚುನಾವಣೆಗೆ ತಯಾರಾಗುತ್ತಿದ್ದಾರೆ.
ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಕಳೆದ ಒಂದು ವಾರದಿಂದಲೇ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಸಿದ್ದರಾಮಯ್ಯ ಸ್ವಕ್ಷೇತ್ರ ಬಾದಮಿಯಲ್ಲ ಪ್ರಚಾರ ಕೈಗೊಂಡಿದ್ದಾರೆ.ಉತ್ತರ ಕರ್ನಾಟಕ ಮತ್ತು ಹುಣಸೂರಿನಲ್ಲಿ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಪ್ರವಾಹ ಪೀಡಿತ ಉತ್ತರ ಕರ್ನಾಟಕ ಹಲವು ಪ್ರದೇಶಗಳಿಗೆ ಭೇಟಿ ನೀಡಿರುವ ಸಿದ್ದರಾಮಯ್ಯ ಅವರ ಸಂಕಷ್ಟಗಳನ್ನು ಆಲಿಸಿದ್ದಾರೆ.
ಹಾಗೆಯೇ ಹಣಸೂರು ಸುತ್ತಮುತ್ತಲಿನ ಹಾರಂಗಿ ನಾಲಾ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಹುಣಸೂರು ರೆಬೆಲ್ ಶಾಸಕ ಎಚ್. ವಿಶ್ವನಾಥ್ ಒಂದು ಕಾಲದಲ್ಲಿ ಸಿದ್ದರಾಮಯ್ಯ ಆಪ್ತ ಸ್ನೇಹಿತರಾಗಿದ್ದವರು, ಆದರೆ ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ ಇಬ್ಬರು ಬದ್ದವೈರಿಗಳಾಗಿದ್ದಾರೆ,
ರಾಜ್ಯ ಬಿಜೆಪಿ ಸರ್ಕಾರ 'ಆಪರೇಷನ್ ಕಮಲದ ಅನೈತಿಕ ಕೂಸು'. ಹಣ, ಆಮಿಷ, ಒತ್ತಡ ತಂತ್ರ ಉಪಯೋಗಿಸಿ ಶಾಸಕರನ್ನು ಕೊಂಡು, ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿರುವ ಯಡಿಯೂರಪ್ಪನವರ ಸರ್ಕಾರಕ್ಕೆ ಸ್ಪಷ್ಟ ಜನಾದೇಶವಿಲ್ಲ. ಈ ಸರ್ಕಾರ ಯಾವ ಕ್ಷಣದಲ್ಲಾದರೂ ಬಿದ್ದು, ಮಧ್ಯಂತರ ಚುನಾವಣೆ ಬರಬಹುದು, ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಟ್ವೀಟ್ ಮಾಡಿದ್ದರು.
ಬೆಳಗಾವಿ ಜಿಲ್ಲೆಯ ಗೋಕಾಕ್ ವಿಧಾನಸಭೆ ಕ್ಷೇತ್ರದ ಅಂಕಲಗಿ ಗ್ರಾಮಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಪ್ರವಾಹ ಸಂತ್ರಸ್ತರ ಅಹವಾಲು ಆಲಿಸಿದರು.
ಅನರ್ಹಗೊಂಡಿರುವ 17 ಶಾಸಕರ ಕ್ಷೇತ್ರಕ್ಕೆ ಉಪ ಚುನಾವಣೆ ಯಾವಾಗ ಬೇಕಾದರೂ ಘೋಷಣೆಯಾಗಬಹುದು, ಹೀಗಾಗಿ ನಾವು ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ,. ಪಕ್ಷದ ಕಾರ್ಯಕರ್ತರ ಜೊತೆ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.