ರಾಜಕೀಯ

ರಾಜ್ಯಸಭಾ ಸದಸ್ಯರಾಗಿ ಬಿಜೆಪಿಯ ಕೆ.ಸಿ.ರಾಮಮೂರ್ತಿ ಅವಿರೋಧ ಆಯ್ಕೆ

Lingaraj Badiger

ಬೆಂಗಳೂರು: ಇತ್ತೀಚೆಗಷ್ಟೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಕೆ.ಸಿ.ರಾಮ ಮೂರ್ತಿ ಅವರು ಗುರುವಾರ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಇದೊಂದು ಅಪರೂಪದ ಘಟನೆಯಾಗಿದೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಕೆ.ಸಿ. ರಾಮಮೂರ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಅದೇ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪುನರಾಯ್ಕೆಯಾಗಿದ್ದಾರೆ.

ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷ್ಮಿ ಅವಿರೋಧ ಆಯ್ಕೆಯನ್ನು ಘೋಷಿಸಿ, ಪ್ರಮಾಣ ಪತ್ರ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಎಸ್.ಆರ್.ವಿಶ್ವನಾಥ್, ರಾಜ್ಯ ಬಿಜೆಪಿ ಸಂಚಾಲಕ ಎ.ಎಚ್.ಆನಂದ್ ಅವರು ಉಪಸ್ಥಿತರಿದ್ದು, ರಾಮಮೂರ್ತಿ ಅವರನ್ನು ಅಭಿನಂದಿಸಿದರು.

ರಾಜ್ಯಸಭೆ ಉಪ ಚುನಾವಣೆಗೆ ಇಬ್ಬರು ಪಕ್ಷೇತರ ‌ಅಭ್ಯರ್ಥಿಗಳ‌ು ನಾಮಪತ್ರ ಸಲ್ಲಿಸಿದ್ದರು. ಆದರೆ ಅವು ತಿರಸ್ಕೃತವಾಗಿದ್ದವು. ಬೇರೆ ಯಾವುದೇ ರಾಜಕೀಯ ಪಕ್ಷದಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿರಲಿಲ್ಲ.

ಅಭ್ಯರ್ಥಿಗಳ ನಾಮಪತ್ರಕ್ಕೆ 10 ಮಂದಿ ಅನುಮೋದಕರ ಸಹಿ ಹಾಕುವುದು ಕಡ್ಡಾಯವಾಗಿದೆ. ಇಬ್ಬರು ಸ್ವತಂತ್ರ ಅಭ್ಯರ್ಥಿಗಳಿಗೆ ಯಾರೂ ಅನುಮೋದಕರು ಸಹಿ ಹಾಕಿರಲಿಲ್ಲ. ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಪರ 10 ಶಾಸಕರು ಅನುಮೋದಕರಾಗಿ ಸಹಿ ಹಾಕಿದ್ದರು. 

ಕೆ.ಸಿ.ರಾಮಮೂರ್ತಿ ಅವರನ್ನು ಕಾಂಗ್ರೆಸ್​ 2016ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆ ಮಾಡಿತ್ತು. ಇದೀಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ಎರಡನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

SCROLL FOR NEXT