ರಾಜಕೀಯ

ಒಗ್ಗಟ್ಟಿನ ಕೊರತೆ: ಹೆಚ್'ಡಿಕೆಗೆ ಒಲಿಯದ ಮತದಾರ, ಖಾತೆಯನ್ನೇ ತೆರೆಯದ ಜೆಡಿಎಸ್'ಗೆ ಭಾರೀ ಮುಖಭಂಗ

Manjula VN

ಬೆಂಗಳೂರು: ಒಗ್ಗಟ್ಟಿನ ಕೊರತೆ, ಕುಟುಂಬ ರಾಜಕೀಯದಿಂದಾಗಿ ಜೆಡಿಎಸ್ ಪಕ್ಷದ ಮೇಲೆ ಬೇಸತ್ತು ಹೋಗಿರುವ ಮತದಾರರು ಈ ಬಾರಿ ತಮ್ಮ ಮುದ್ರೆಯನ್ನು ಬಿಜೆಪಿಗೆ ಒತ್ತಿದ್ದು, ಉಪಚುನಾವಣಾ ಫಲಿತಾಂಶದಲ್ಲಿ ಖಾತೆಯನ್ನೇ ತೆರೆಯದ ಜೆಡಿಎಸ್'ಗೆ ಭಾರೀ ಮುಖಭಂಗವಾಗಿದೆ. 

2008ರಲ್ಲಿ ನಡೆದ 8 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 5 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು. ಆದರೆ, ಈ ಬಾರಿ ಸಾಕಷ್ಟು ಪ್ರಚಾರ, ಯೋಜನೆ, ಶ್ರಮಗಳ ನಂತರವೂ ತನ್ನದೇ ಪ್ರಾಬಲ್ಯವನ್ನು ಹೊಂದಿದ್ದ ಕೆ.ಆರ್.ಪೇಟೆ, ಹುಣಸೂರು, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಗಳನ್ನು ಕಳೆದುಕೊಂಡಿದೆ. 

ತನ್ನ ತನವನ್ನು ಜೆಡಿಎಸ್ ಕಳೆದುಕೊಂಡಿದೆ. ಇದಲ್ಲದೆ, ಕುಟುಂಬ ರಾಜಕೀಯ ಕೂಡ ಪಕ್ಷಕ್ಕೆ ಭಾರೀ ಹೊಡೆತವನ್ನು ನೀಡಿದೆ. ಪಕ್ಷದ ನಾಯಕರ ಕುಟುಂಬ ಸದಸ್ಯರೇ ಸ್ಟಾರ್ ಪ್ರಚಾರಕರಾಗಿದ್ದಾರೆ. ಪ್ರಚಾರ, ಮಾಧ್ಯಮ ಪ್ರಕಟಣೆ, ನಿಧಿ ಸಂಗ್ರಹ ಸೇರಿದಂತೆ ಎಲ್ಲಾ ಕೆಲಸವನ್ನು ಒಂದು ಕುಟುಂಬ ಹೇಗೆ ಮಾಡಲು ಸಾಧ್ಯ. ಒಂದು ಕುಟುಂಬ ಪಕ್ಷವನ್ನು ಹೇಗೆ ನಡೆಸಲು ಸಾಧ್ಯ? ಎಂದು ತಜ್ಞರು ಹೇಳಿದ್ದಾರೆ. 

ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಮಲತಾಯಿ ಧೋರಣೆ ತೋರಿದ್ದು, ಇದರಿಂದಾಗಿ ಮೈತ್ರಿ ಸರ್ಕಾರ ಉರುಳಿ ಬಿದ್ದಿತ್ತು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಈಗಲೂ ದೂರು ಹೇಳುತ್ತಾರೆ. ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಶಾಸಕರು ಅಸಮಾಧಾನ ಹೊಂದಿದ್ದರು. ತಮಗೆ ತಾವು ಇಷ್ಟಪಟ್ಟಂತಹ ಸ್ಥಾನಗಳನ್ನು ನೀಡಲಾಗುತ್ತಿಲ್ಲ ಎಂದು ಹೇಳುತ್ತಿದ್ದರು. ಕುಮಾರಸ್ವಾಮಿಯವರು ವ್ಯತಿರಿಕ್ತವಾಗಿ ವರ್ತಿಸುತ್ತಿದ್ದಾರೆಂದು ಹೇಳುತ್ತಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳಾದ ಮೇಲಾದರೂ ಎಚ್ಚೆತ್ತುಕೊಂಡು ಜೆಡಿಎಸ್ ಪಾಠ ಕಲಿಯಬೇಕಾಗಿದೆ. ಪಕ್ಷ ಸೋಲಿನ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 

SCROLL FOR NEXT