ರಾಜಕೀಯ

ಒಂದೆಡೆ ಅಮಿತ್ ಶಾ ಬ್ಯುಸಿ, ಇನ್ನೊಂದೆಡೆ ಧನುರ್ಮಾಸ: ಸಂಕ್ರಾಂತಿ ಬಳಿಕವಷ್ಟೇ ನೂತನ ಶಾಸಕರಿಗೆ ಸಚಿವ ಭಾಗ್ಯ? 

Sumana Upadhyaya

ಬೆಂಗಳೂರು: ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಲ್ಲಿ 12 ಮಂದಿ ಬಿಜೆಪಿಯಿಂದ ಮತ್ತೆ ಆರಿಸಿ ಬಂದು ಬಿಜೆಪಿ ನೇತೃತ್ವದ ಸರ್ಕಾರ ಸುರಕ್ಷಿತವಾಗಿದೆ. ಇನ್ನಿರುವುದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆ.


ಆದರೆ ಸಿಎಂ ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆ ಮಾಡುವ ಆತುರದಲ್ಲಿ ಇರುವಂತೆ ಕಾಣುತ್ತಿಲ್ಲ. ಹೀಗಾಗಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಲು ನೂತನ ಶಾಸಕರು ಇನ್ನಷ್ಟು ದಿನ ಕಾಯಬೇಕು. ಸಂಪುಟ ವಿಸ್ತರಣೆಗೂ ಮುನ್ನ ಯಡಿಯೂರಪ್ಪನವರು ದೆಹಲಿಗೆ ಹೋಗಿ ಹೈಕಮಾಂಡ್ ನ್ನು ಭೇಟಿ ಮಾಡಿ ಚರ್ಚೆ ನಡೆಸಬೇಕು. ಅವರು ದೆಹಲಿಗೆ ಹೋಗಲು ಇನ್ನೂ ಒಂದು ವಾರವಾಗಬಹುದು. 


ಬಿಜೆಪಿಯ 12 ಚುನಾಯಿತ ಪ್ರತಿನಿಧಿಗಳು ಸೇರಿದಂತೆ 15 ನೂತನ ಚುನಾಯಿತ ಪ್ರತಿನಿಧಿಗಳು ಇಂದು ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ನಿನ್ನೆ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಅಮಿತ್ ಶಾ ಅವರು ಜಾರ್ಖಂಡ್ ಚುನಾವಣೆಯಲ್ಲಿ ನಿರತರಾಗಿದ್ದಾರೆ. ಅವರ ಜೊತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲು ಸಾಧ್ಯವಾಗಿಲ್ಲ. ಇನ್ನೊಂದು ವಾರ ಕಳೆದ ಮೇಲೆ ದೆಹಲಿಗೆ ತೆರಳಿ ಅವರ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.


ಇದೇ 16ರೊಳಗೆ ಸಂಪುಟ ವಿಸ್ತರಣೆಯಾಗದಿದ್ದರೆ ಸಂಕ್ರಾಂತಿ ಕಳೆದು ಜನವರಿ 14ರ ಬಳಿಕವಷ್ಟೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಡಿಸೆಂಬರ್ 16ರಿಂದ ಜನವರಿ 14ರವರೆಗೆ ಧನುರ್ಮಾಸ ಇದ್ದು ಈ ಸಮಯ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಸಚಿವರಾಗಬಯಸುತ್ತಿರುವ ಶಾಸಕರ ಜೊತೆ ನಾಯಕರಿಗೆ ಮಾತುಕತೆಗೂ ಸಾಕಷ್ಟು ಅವಕಾಶ ಸಿಕ್ಕಂತಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಧನುರ್ಮಾಸ ಇರುವುದು ಹೌದು, ಆದರೆ ಧನುರ್ಮಾಸ ಆರಂಭಕ್ಕೆ ಮುನ್ನ ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ ಎನ್ನುತ್ತಾರೆ ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜು.


ಇಂದು ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಬೆಳಗ್ಗೆ 11.45ಕ್ಕೆ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುತ್ತೇವೆ. ಧನುರ್ಮಾಸ ಮುಗಿದ ನಂತರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದಾದರೆ ಒಳ್ಳೆಯದಾಯಿತು ಎನ್ನುತ್ತಾರೆ ಮಹಾಲಕ್ಷ್ಮಿ ಲೇ ಔಟ್ ಶಾಸಕ ಗೋಪಾಲಯ್ಯ. 


ಕಳೆದ 9ನೇ ತಾರೀಖಿನಂದು ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಕೂಡಲೇ ಸಚಿವ ಸಂಪುಟ ಶೀಘ್ರವೇ ವಿಸ್ತರಣೆ ಮಾಡುವುದಾಗಿ ಸಿಎಂ ಹೇಳಿದ್ದರು. ಬಿಜೆಪಿ ಸರ್ಕಾರ ಬರಲು ಸಹಾಯ ಮಾಡಿದ ಶಾಸಕರೆಲ್ಲರಿಗೂ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗುವುದು ಎಂದು ಕೂಡ ಭರವಸೆ ನೀಡಿದ್ದರು.

SCROLL FOR NEXT