ರಾಜಕೀಯ

ಅನರ್ಹ ಶಾಸಕರು ಎಲ್ಲಿದ್ದರೂ ಬ್ಲಾಕ್ ಮೇಲ್ ಗಿರಾಕಿಗಳೇ: ಮಾಜಿ ಸಚಿವ ಶಿವಶಂಕರ ರೆಡ್ಡಿ

Lingaraj Badiger

ಚಿಕ್ಕಬಳ್ಳಾಪುರ: ಚುನಾವಣೆಯಲ್ಲಿ ಗೆದ್ದ ಮೇಲೆ ಅನರ್ಹ ಶಾಸಕರು ಬಿಜೆಪಿ ಪಕ್ಷದಲ್ಲೂ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾರೆ. ಅವರು ಎಲ್ಲಿದ್ದರೂ ಬ್ಲಾಕ್ ಮೇಲ್ ಗಿರಾಕಿಗಳೇ ಎಂದು ಮಾಜಿ ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಟೀಕಿಸಿದ್ದಾರೆ.

ಇಂದು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿಯೂ ಬ್ಲಾಕ್ ಮೇಲ್ ಶುರು ಮಾಡಿದ್ದಾರೆ. ಸೋತವರಿಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಕೊಡಬೇಕೆಂದು ಮಖ್ಯಮಂತ್ರಿಗಳಿಗೆ ಬ್ಲಾಕ್ ಮೇಲ್ ಮಾಡುವುದು ನ್ಯಾಯವಲ್ಲ ಎಂದ ಅವರು, ಹೀಗೇ ನಡೆದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಎಲ್ಲಿರುತ್ತದೆ ಎಂದು ಶಿವಶಂಕರರೆಡ್ಡಿ ಪ್ರಶ್ನಿಸಿದ್ದಾರೆ.

ಬಿಜೆಪಿ ಪಕ್ಷದಲ್ಲಿ 25 ರಿಂದ 30 ವರ್ಷಗಳ ಕಾಲ ದುಡಿದ ಸಚಿವರಿಗೆ ಅರ್ಹತೆ ಇದ್ದರೂ ಅನರ್ಹ ಶಾಸಕರ ಬ್ಲಾಕ್ ಮೇಲ್ ರಾಜಕಾರಣದಿಂದಾಗಿ ಅನೇಕ ಹಿರಿಯ ಮುಖಂಡರು ಸಚಿವ ಸ್ಥಾನದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಬಿಜೆಪಿ ಸರ್ಕಾರ ಆಡಳಿತದಲ್ಲಿ ಹೆಚ್ಚು ದಿನ ಉಳಿಯವ ಲಕ್ಷಣಗಳು ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದ ಬಿಜೆಪಿ ಸರ್ಕಾರ ಕೇವಲ ಅಧಿಕಾರ ಹಾಗೂ ಚುನಾವಣೆ ನಡೆಸುವ ಸಲುವಾಗಿಯೇ ಅಧಿಕಾರಕ್ಕೆ ಬಂದಂತೆ ಕಾಣುತ್ತಿದೆ. ಈ ಸರ್ಕಾರಕ್ಕೆ ಯಾವುದೇ ಜನಪರವಾದ ಅಭಿವೃದ್ಧಿ ಕಾಳಜಿ ಇದ್ದಂತೆ ತೋರುತ್ತಿಲ್ಲ ಎಂದು ಶಿವಶಂಕರ್ ರೆಡ್ಡಿ ವಾಗ್ದಾಳಿ ನಡೆಸಿದರು.

SCROLL FOR NEXT