ರಾಜಕೀಯ

ಸರ್ಕಾರ ಪತನದ ಭೀತಿ: ಫೆ.8 ರಂದು ಮತ್ತೆ ಕಾಂಗ್ರೆಸ್ ಶಾಸಕಾಂಗ ಸಭೆ, ವಿಪ್ ಜಾರಿ

Lingaraj Badiger
ಬೆಂಗಳೂರು: ಬಜೆಟ್ ಮಂಡನೆ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ, ದೋಸ್ತಿ ಸರ್ಕಾರ ಪತನಗೊಳಿಸಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಫೆಬ್ರವರಿ 8ರಂದು ಮತ್ತೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ.
ಈಗಾಗಲೇ ಮೈತ್ರಿ ಸರ್ಕಾರದ ಜಂಟಿ ಅಧಿವೇಶನ ಮತ್ತು ಬಜೆಟ್ ಕಲಾಪಕ್ಕೆ ಹಾಜರಾಗುವಂತೆ ಕಾಂಗ್ರೆಸ್ ಶಾಸಕರಿಗೆ ಮುಖ್ಯ ಸಚೇತಕರು ವಿಪ್ ಜಾರಿಗೊಳಿಸಿದ್ದರು. ಆದರೂ ಇಂದು ಕಾಂಗ್ರೆಸ್ ಪಕ್ಷದ 12ಕ್ಕೂ ಹೆಚ್ಚು ಶಾಸಕರು ಸದನಕ್ಕೆ ಗೈರಾಗುವ ಮೂಲಕ ವಿಪ್ ನ್ನು ಉಲ್ಲಂಘಿಸಿದ್ದಾರೆ.
ಈ ನಡುವೆ ಫೆಬ್ರವರಿ 8 ರಂದು ಶಾಸಕಾಂಗ ಸಭೆ ಕರೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಭೆಗೆ ಹಾಜರಾಗುವಂತೆ ಮತ್ತೆ ವಿಪ್ ಜಾರಿ ಮಾಡಿದ್ದಾರೆ. 
ಫೆ.8ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿದ್ದಾರೆ. ಅಂದಿನ ಸಭೆಗೂ ಕಾಂಗ್ರೆಸ್ ಶಾಸಕರು ಗೈರಾದರೆ ಬಿಜೆಪಿ ಪ್ರತಿಭಟನೆ ಮುಂದುವರೆಸಿ ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲವೆಂದು ಧರಣಿ ನಡೆಸಿ ಬಜೆಟ್ ಮಂಡನೆಗೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೀಗಾಗಿ ಅಂದು ಶಾಸಕಾಂಗ ಸಭೆ ಕರೆಯುವ ಮೂಲಕ ಎಲ್ಲಾ ಶಾಸಕರು ಸಭೆಯಲ್ಲಿ ಹಾಜರಾಗುವಂತೆ ನೋಡಿಕೊಳ್ಳುವ ತಂತ್ರವಾಗಿದೆ. ಆದರೆ ಜಂಟಿ ಅಧಿವೇಶನಕ್ಕೆ ಹಾಜರಾಗದ ಕಾಂಗ್ರೆಸ್ ಶಾಸಕರು ಶಾಸಕಾಂಗ ಸಭೆಗೆ ಹಾಜರಾಗುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.
ಜನವರಿ 18 ರಂದು ನಡೆದ ಶಾಸಕಾಂಗ ಸಭೆಗೆ ನಾಲ್ವರು ಶಾಸಕರು ಗೈರು ಹಾಜರಾಗಿದ್ದರು. ಈ ಸಂಬಂಧ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಾಲ್ವರು ಶಾಸಕರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿದ್ದರು. ನಾಲ್ವರು ಶಾಸಕರು ನೋಟೀಸಿಗೆ ಉತ್ತರ ನೀಡಿದ್ದರು. ಆದರೆ ಶೋಕಾಸ್ ನೊಟೀಸಿಗೆ ಉತ್ತರ ನೀಡಿದ ಬಳಿಕ ಮತ್ತೆ ಕೆಪಿಸಿಸಿ ಅಧ್ಯಕ್ಷರು ನಾಲ್ವರು ಶಾಸಕರಿಗೆ ನೊಟೀಸ್ ಜಾರಿ ಮಾಡಿ ಶಾಸಕಾಂಗ ನಾಯಕ ಸಿದ್ದರಾಮಯ್ಯ ಮುಂದೆ ಖುದ್ದಾಗಿ ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದ್ದರು. ಆದರೆ ಇದುವರೆಗೂ ನಾಲ್ವರು ಶಾಸಕರು ಸಿದ್ದರಾಮಯ್ಯ ಮುಂದೆ ಹಾಜರಾಗಿಲ್ಲ.
ಇಂದು ಸಂಜೆ ಕಾಂಗ್ರೆಸ್-ಜೆಡಿಎಸ್ ಜಂಟಿ ಶಾಸಕಾಂಗ ಸಭೆಯನ್ನು ಖಾಸಗಿ ಹೋಟೆಲ್ ನಲ್ಲಿ ಕರೆಯಲಾಗಿದೆ. ಅಲ್ಲದೆ ಇಂದಿನ ಸಭೆಗೂ ಅತೃಪ್ತ ಶಾಸಕರು ಗೈರು ಹಾಜರಾದರೆ ಕನಿಷ್ಠ ಪಕ್ಷ  ಫೆಬ್ರವರಿ 8 ರಂದು ಕರೆಯಲಾಗಿರುವ ಶಾಸಕಾಂಗ ಸಭೆಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಫೆಬ್ರವರಿ 8 ರ ಶಾಸಕಾಂಗ ಸಭೆಗೆ ಅಸಮಾಧಾನಿತ ಶಾಸಕರು ಗೈರಾದರೆ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆಂಬ ಮಾಹಿತಿ ಸ್ಪಷ್ಟವಾಗಲಿದೆ. ಬಳಿಕ ಮುಂದಿನ ಕಾನೂನಾತ್ಮಕ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
SCROLL FOR NEXT