ರಾಜಕೀಯ

ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ: ಅತೃಪ್ತ ಶಾಸಕರಿಗೆ ಮತ್ತೆ ನೋಟಿಸ್ ಜಾರಿ

Lingaraj Badiger
ಬೆಂಗಳೂರು: ವಿಧಾನಸಭೆ ಕಲಾಪ ಹಾಗೂ ಶಾಸಕಾಂಗ ಸಭೆಗೆ ನಿರಂತರ ಗೈರು ಹಾಜರಾಗಿರುವ ಅತೃಪ್ತ ಕಾಂಗ್ರೆಸ್ ಶಾಸಕರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಮತ್ತೊಮ್ಮೆ ನೊಟೀಸ್ ಜಾರಿ ಮಾಡಿದ್ದಾರೆ.
ಫೆಬ್ರವರಿ 8 ರಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಾಗಬೇಕು. ಒಂದು ವೇಳೆ ನಾಳಿನ ಶಾಸಕಾಂಗ ಸಭೆಗೆ ಗೈರು ಹಾಜರಾದರೆ ಸಂವಿಧಾನದ ಅನುಚ್ಛೇದ 10ರ ಪ್ರಕಾರ ಶಾಸಕರ ಸದಸ್ವತ್ವ ಅನರ್ಹಗೊಳಿಸುವ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಹಳ್ಳಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ, ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ್ ಗೆ ನೊಟೀಸ್ ಜಾರಿ ಮಾಡಲಾಗಿದೆ. 
ಈ ನಾಲ್ವರು ಶಾಸಕರು ಇದುವರೆಗೆ ನಡೆದ ಶಾಸಕಾಂಗ ಸಭೆ, ಹಾಗೂ ವಿಧಾನಸಭೆ ಅಧಿವೇಶನಕ್ಕೂ ನಿರಂತರ ಗೈರಾಗುವ ಮೂಲಕ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ.
ಇನ್ನು ಬಿ.ಸಿ.ಪಾಟೀಲ್ ಹಾಗೂ ಜೆ.ಎನ್.ಗಣೇಶ್ ಸಹ ವಿಧಾನ ಸಭೆ ಕಲಾಪಕ್ಕೆ ಗೈರಾಗಿರುವುದನ್ನು ಅಶಿಸ್ತು ಎಂದು ಪರಿಗಣಿಸಿರುವ ಶಾಸಕಾಂಗ ನಾಯಕ ಸಿದ್ದರಾಮಯ್ಯ ನಾಪತ್ತೆಯಾಗಿರುವ ಈ ಇಬ್ಬರು ಶಾಸಕರಿಗೂ ನೋಟಿಸ್ ಜಾರಿ ಮಾಡಿದ್ದಾರೆ. 
ಒಂದು ವೇಳೆ ನಾಳಿನ ಶಾಸಕಾಂಗ ಸಭೆಗೆ ಹಾಗೂ ಕಲಾಪಕ್ಕೆ ಗೈರು ಹಾಜರಾದರೆ ನಾಲ್ವರು ಶಾಸಕರನ್ನು ಶಾಸಕತ್ವದಿಂದ ಅನರ್ಹಗೊಳಿಸುವಂತೆ ಸ್ಪೀಕರ್ ಗೆ ಕಾಂಗ್ರೆಸ್ ನಾಯಕರು ಮನವಿ ಮಾಡುವ ಸಾಧ್ಯತೆ ಇದೆ. ಆ ಮೂಲಕ ಅತೃಪ್ತರಿಗೆ ಬಿಸಿ ಮುಟ್ಟಿಸಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
SCROLL FOR NEXT