ರಾಜಕೀಯ

ನಾಲ್ವರು ಅತೃಪ್ತ​ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ​ಗೆ ಕಾಂಗ್ರೆಸ್ ದೂರು

Lingaraj Badiger
ಬೆಂಗಳೂರು: ವಿಪ್ ಸೇರಿದಂತೆ ಪಕ್ಷದ ಎಲ್ಲಾ ಆದೇಶಗಳನ್ನು​ ಉಲ್ಲಂಘಿಸಿದ ಕಾಂಗ್ರೆಸ್ ನ ನಾಲ್ವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರು, ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗುವಂತೆ ನೀಡಿದ್ದ ವಿಪ್​ ಉಲ್ಲಂಘನೆ, ನೋಟಿಸ್ ಗೆ ಸಮರ್ಪಕ ಉತ್ತರ ನೀಡದೆ ಇರುವುದು ಹಾಗೂ ಬಜೆಟ್​ ಅಧಿವೇಶನಕ್ಕೂ ಗೈರಾದ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಳ್ಳಿ, ಉಮೇಶ್​ ಜಾಧವ್​ ಹಾಗೂ ನಾಗೇಂದ್ರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದೂರು ನೀಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಪರಮೇಶ್ವರ್, ಸಚಿವ ಕೃಷ್ಣಬೈರೇಗೌಡ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಾಥ್ ನೀಡಿದರು.
ಅತೃಪ್ತ ಶಾಸಕರ ಅನರ್ಹಗೊಳಿಸುವ ಸಂಬಂಧ ಸಿದ್ದರಾಮಯ್ಯ ಅವರು ವಕೀಲ ಶಶಿಕಿರಣ ಮತ್ತು ತಂಡದಿಂದ ಕಾನೂನು ಸಲಹೆ ಪಡೆದು, ಬಳಿಕ ಸ್ಪೀಕರ್​ಗೆ ದೂರು ನೀಡಿದ್ದಾರೆ.
ಪತ್ರಿಕಾ ವರದಿಗಳು, ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆ, ಸಿಎಲ್​ಪಿ ಸಂಬಂಧ ನೀಡಿದ ನೊಟೀಸ್ ಪ್ರತಿಗಳ ಸಮೇತ 82 ಪುಟಗಳ ದೂರಿನ ಪ್ರತಿಯನ್ನು ಸ್ಪೀಕರ್​ಗೆ ಸಲ್ಲಿಸಲಾಗಿದೆ.
SCROLL FOR NEXT