ರಾಜಕೀಯ

ಆಪರೇಷನ್ ಆಡಿಯೋ: ರಾಯಚೂರು ಎಸ್ ಪಿಗೆ ದೂರು ನೀಡಿದ ಶರಣಗೌಡ

Lingaraj Badiger
ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಭಾಗಿಯಾಗಿರುವ ಆಪರೇಷನ್ ಕಮಲದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ನಾಗನಗೌಡ ಪಾಟೀಲ್ ಕಂದಕೂರು ಅವರ ಪುತ್ರ ಹಾಗೂ, ಪ್ರಕರಣದ ರೂವಾರಿ ಶರಣಗೌಡ ಕಂದಕೂರು ಅವರು ಬುಧವಾರ ರಾಯಚೂರು ಎಸ್​ಪಿಗೆ ದೂರು ನೀಡಿದ್ದಾರೆ.
ಇಂದು ಮಧ್ಯಾಹ್ನ ತಮ್ಮ ಬೆಂಬಲಿಗರೊಂದಿಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರ್ ಬಾಬು ಅವರನ್ನು ಭೇಟಿ ಮಾಡಿದ ಶರಣಗೌಡ ಅವರು, ಬಿಜೆಪಿ ಸೇರಲು ತಮಗೆ ಆಮಿಷ ಒಡ್ಡಿದ ಬಿಎಸ್ ಯಡಿಯೂರಪ್ಪ, ಶಾಸಕರಾದ ಶಿವನಗೌಡ ನಾಯಕ್ ಹಾಗೂ ಪ್ರೀತಂ ಗೌಡ ಅವರ ವಿರುದ್ಧ ದೂರು ನೀಡಿದ್ದಾರೆ.
ತಮ್ಮೊಂದಿಗೆ ಸಂವಾದ ನಡೆಸಿದ ಯಡಿಯೂರಪ್ಪ, ಶಿವನಗೌಡ ನಾಯಕ ಹಾಗೂ ಪ್ರೀತಮ್ ಗೌಡ ವಿರುದ್ಧ ದೇವದುರ್ಗಾ ಪೊಲೀಸರಿಗೆ ದೂರು ನೀಡಲು ಶರಣಗೌಡ ನಿರ್ಧರಿಸಿದ್ದರು. ಆದರೆ ದೇವದುರ್ಗದಲ್ಲಿ ಭದ್ರತಾ ಅಪಾಯವಿದ್ದರಿಂದ ಪ್ಲಾನ್ ಬದಲಾಗಿ ಕೊನೆಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಬಜೆಟ್​ಗೆ ಹಿಂದಿನ ದಿನ, ಅಂದರೆ ಫೆಬ್ರವರಿ 7ರ ರಾತ್ರಿ ದೇವದುರ್ಗಾದಲ್ಲಿ ಯಡಿಯೂರಪ್ಪ, ಶಿವನಗೌಡ ನಾಯಕ ಮತ್ತಿತರರನ್ನು ಭೇಟಿಯಾಗಿ ಮಾತುಕತೆ ನಡೆಸುವಾಗ ಶರಣಗೌಡ ಅವರು ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಅದರಲ್ಲಿ, ಶರಣುಗೌಡ ಅವರಿಗೆ ತಮ್ಮ ತಂದೆಯನ್ನು ಬಿಜೆಪಿಗೆ ಬರಲು ಒಪ್ಪಿಸಿದರೆ ಶಾಸಕ ಹಾಗೂ ಮಂತ್ರಿಸ್ಥಾನ ಕೊಡುವುದಾಗಿ ಆಮಿಷ ಒಡ್ಡಲಾಯಿತು. ಹಾಗೆಯೇ ಕೋಟಿಗಟ್ಟಲೆ ದುಡ್ಡನ್ನೂ ತಲುಪಿಸುವುದಾಗಿ ಭರವಸೆ ನೀಡಲಾಗಿದ್ದು, ಅದರ ಆಡಿಯೋ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ.
SCROLL FOR NEXT