ಮುಂಬೈ: ಕರ್ನಾಟಕ ರಾಜಕೀಯದಲ್ಲಿ ಮತ್ತೆ ಆಪರೇಷನ್ ಕಮಲದ ಆರ್ಭಟ ಜೋರಾಗಿಯೇ ಸಾಗಿದ್ದು, ಕಾಂಗ್ರೆಸ್ ಇಬ್ಬರು ಶಾಸಕರು ಮೈತ್ರಿ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದ ಬೆನ್ನಲ್ಲೇ, 2-3 ದಿನದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಮಹಾರಾಷ್ಟ್ರ ಬಿಜೆಪಿ ಮುಖಂಡ ರಾಮ್ ಶಿಂಧೆ ಹೇಳಿದ್ದಾರೆ.
ಆಪರೇಷನ್ ಕಮಲದ ಪರಿಣಾಮ ಬಿಜೆಪಿ ಶಾಸಕರು ಗುರುಗ್ರಾಮದಲ್ಲಿ ಮತ್ತು ಕಾಂಗ್ರೆಸ್ ಕೆಲ ಶಾಸಕರು ಮುಂಬೈನ ರೆಸಾರ್ಟ್ ನಲ್ಲಿ ಠಿಕಾಣಿ ಹೂಡಿರುವಂತೆಯೇ ಮಹಾರಾಷ್ಟ್ರ ಬಿಜೆಪಿ ಮುಖಂಡ ರಾಮ್ ಶಿಂಧೆ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದೆ. ಆಪರೇಷನ್ ಕಮಲದ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ರಾಮ್ ಶಿಂಧೆ ಅವರು, ಆಪರೇಷನ್ ಕಮಲ ಸಂಪೂರ್ಣ ಯಶಸ್ವಿಯಾಗಿದೆ. ಇನ್ನೆರಡು ಮೂರು ದಿನದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ್ದಾರೆ.
'ಇದೇ ವಾರದ ಶುಕ್ರವಾರ ಬಿಜೆಪಿ ಕರ್ನಾಟಕ ರಾಜ್ಯದಲ್ಲಿ ಈಗಿರುವ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರವನ್ನು ಮುರಿದು ಸರ್ಕಾರ ರಚಿಸಲಿದೆ. ಆಪರೇಷನ್ ಕಮಲವನ್ನು ಮಾಡಿರುವುದು ಸತ್ಯ. ಇದು ಈ ಬಾರಿ ಸಂಪೂರ್ಣ ಯಶಸ್ವಿಯಾಗಿದೆ. ಊಹಾಪೋಹಗಳೇನೂ ಇಲ್ಲ. ನಮ್ಮ ಜತೆ ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರಿದ್ದಾರೆ. ಜತೆಗೆ ಎಲ್ಲರಿಗೂ ತಿಳಿದಿರುವಂತೆ ಇಬ್ಬರು ಪಕ್ಷೇತರ ಶಾಸಕರೂ ಇದ್ದಾರೆ. ಇನ್ನೆರಡು ದಿನಗಳಲ್ಲಿ ಸರ್ಕಾರ ರಚನೆ ಮಾಡುತ್ತೇವೆ" ಎಂದು ಹೇಳಿದ್ದಾರೆ.
ಅಂತೆಯೇ ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್ ಗೆ ಕಾಂಗ್ರೆಸ್ ಬೆಂಬಲ ನೀಡಿದ್ದರ ಬಗ್ಗೆ ಶಾಸಕರಿಗೆ ಕಾಂಗ್ರೆಸ್ ಮೇಲಿನ ನಂಬಿಕೆ ಹೋಗಿದೆ. ಮೈತ್ರಿ ಸರ್ಕಾರದ ಮೇಲಿದ್ದ ನಂಬಿಕೆ ಕುಸಿದಿದೆ. ಆದ್ದರಿಂದ ಆಪರೇಷನ್ ಕಮಲ ಯಶಸ್ವಿಯಾಗಲಿದೆ ಎಂದು ರಾಮ್ ಶಿಂಧೆ ಹೇಳಿದ್ದಾರೆ.
ಸಂಕ್ರಾಂತಿಯ ದಿನದಂದು ರಾಜ್ಯ ರಾಜಕೀಯದಲ್ಲಿ ಹೊಸ ಕ್ರಾಂತಿ ಆಗಲಿದೆ ಎಂದು ಈ ಹಿಂದೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದಿದ್ದರು. ಕಳೆದ ಎಂಟು ತಿಂಗಳುಗಳಲ್ಲಿ ಯಡಿಯೂರಪ್ಪ ಈ ರೀತಿಯ ಹೇಳಿಕೆಯನ್ನು ಹಲವು ಬಾರಿ ನೀಡಿದ್ದರು. ಆದರೆ ಆ ಮಾತುಗಳು ಕೇವಲ ಗಾಳಿಯಲ್ಲಿ ಗುಂಡು ಹೊಡೆದಂತಾಗಿತ್ತು. ಈ ಬಾರಿಯೂ ಆಪರೇಷನ್ ಕಮಲ ಯಶಸ್ವಿಯಾಗಲ್ಲ, ಇದೆಲ್ಲಾ ಆಧಾರರಹಿತ ಮಾತುಗಳು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ನ ಮುಖಂಡರು ಹೇಳಿದ್ದರು. ಆದರೆ ಈ ಬಾರಿ ಹಿಂದಿನಂತೆ ಆಗದೇ, ಇಬ್ಬರು ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿರುವುದು ಹಾಲಿ ರಾಜಕೀಯ ಬಿರುಗಾಳಿಗೆ ಹಿಡಿದ ಕನ್ನಡಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics