ರಾಜಕೀಯ

ಅತೃಪ್ತ ಶಾಸಕರಿಗೆ ಹುದ್ದೆ ನೀಡಲು ಸಚಿವರು ರಾಜೀನಾಮೆಗೆ ಸಿದ್ದರಿದ್ದರು: ಡಿ ಕೆ ಶಿವಕುಮಾರ್

Sumana Upadhyaya

ಬೆಂಗಳೂರು: ಪಕ್ಷದ ಹಿತದೃಷ್ಟಿಯಿಂದ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡಲು ತಮ್ಮನ್ನು ಸೇರಿ ಈಗಿರುವ ಎಲ್ಲಾ ಸಚಿವರು ರಾಜೀನಾಮೆ ನೀಡಲು ಮುಂದಾಗಿದ್ದೆವು ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ನಾವು ಪಕ್ಷದ ನಿಷ್ಠಾವಂತ ಸೈನಿಕರು. ಹಿಂದೆ ಧರಂ ಸಿಂಗ್ ಸರ್ಕಾರವಿದ್ದಾಗ ರಾಜಕೀಯ ಕಾರಣಕ್ಕಾಗಿ ನನ್ನನ್ನು ಸಚಿವ ಹುದ್ದೆಯಿಂದ ದೂರವಿಡಲಾಗಿತ್ತು. ಕಳೆದ ಅವಧಿಯಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿ ಬರುತ್ತಿರುವುದು ಆರನೇ ಬಾರಿ. ಆರಂಭದಲ್ಲಿ ಸಿದ್ದರಾಮಯ್ಯನವರು ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ ಎಂದರು.

ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಲವು ಹಿರಿಯ ಶಾಸಕರಾದ ವಿ ಮುನಿಯಪ್ಪ, ರಾಮಲಿಂಗಾ ರೆಡ್ಡಿ, ರೋಶನ್ ಬೇಗ್, ಹೆಚ್ ಕೆ ಪಾಟೀಲ್ ಮೊದಲಾದವರು ಈ ಸರ್ಕಾರದಲ್ಲಿ ಮಂತ್ರಿಗಳಾಗಿಲ್ಲ. ಈ ಹೊತ್ತಿನಲ್ಲಿ ನಾನು ಸತ್ಯ ಹೇಳುತ್ತೇನೆ, ಪಕ್ಷದ ಹಿತಾದೃಷ್ಟಿಯಿಂದ ಅಗತ್ಯವಿದ್ದರೆ ನಾವು ಈಗಲೂ ಸಚಿವ ಹುದ್ದೆಯನ್ನು ಬಿಟ್ಟುಕೊಡಲು ಸಿದ್ದರಿದ್ದೇವೆ. ಇಲ್ಲಿ ಯಾವುದೂ ಮುಖ್ಯವಾಗುವುದಿಲ್ಲ. ಪಕ್ಷ, ಕಾರ್ಯಕರ್ತರು ಮತ್ತು ಶಾಸಕರು ಮುಖ್ಯವಾಗುತ್ತಾರೆ. ನಮ್ಮ ಪಕ್ಷವನ್ನು ಮತ್ತೆ ಚುನಾವಣೆಯಲ್ಲಿ ಗೆಲ್ಲಿಸುವುದು ನಮಗೆ ಮುಖ್ಯ ಎಂದರು.

ಅಗತ್ಯವಿದ್ದರೆ ಸಚಿವ ಹುದ್ದೆ ಬಿಟ್ಟುಕೊಡುವ ಕುರಿತು ಕೆಲ ದಿನಗಳ ಹಿಂದೆ ಕಾಂಗ್ರೆಸ್ ಸಚಿವರುಗಳ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ನಾನೇ ಖುದ್ದಾಗಿ ಈ ಬಗ್ಗೆ ಹೇಳಿಕೊಂಡಿದ್ದೆ. ಹಾಗಾದರೆ ಎಷ್ಟು ಸಚಿವರು ರಾಜೀನಾಮೆ ನೀಡಲು ಮುಂದೆ ಬಂದಿದ್ದರು ಎಂದು ಕೇಳಿದ್ದಕ್ಕೆ ನಾವೆಲ್ಲರೂ ಸಿದ್ದರಿದ್ದೆವು ಎಂದರು.

ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೇ ಬಿಂಬಿತರಾಗಿರುವ ಡಿ ಕೆ ಶಿವಕುಮಾರ್ ಅವರ ಈ ಹೇಳಿಕೆ ಪಕ್ಷದೊಳಗೆ ಶಾಸಕರಲ್ಲಿ ಅಸಮಾಧಾನ ಇರುವಾಗ ಮಹತ್ವ ಪಡೆದುಕೊಂಡಿದೆ.

ಈಗಲ್ಟನ್ ರೆಸಾರ್ಟ್ ನಿಂದ ಭೂಮಿ ಅತಿಕ್ರಮಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭೂಮಿ ಅತಿಕ್ರಮಣದಿಂದ ಆಗಿರುವ ನಷ್ಟವನ್ನು ರೆಸಾರ್ಟ್ ಮಾಲೀಕರಿಂದ ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗುತ್ತದೆ. ಅದಕ್ಕಾಗಿ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಲಾಗುವುದು ಎಂದರು.

ತಪ್ಪು ಮಾಡಿದವರನ್ನು ಯಾರನ್ನೂ ಸರ್ಕಾರ ರಕ್ಷಿಸಲು ನೋಡುವುದಿಲ್ಲ. ಇನ್ನು ಶಾಸಕರು ರೆಸಾರ್ಟ್ ನಲ್ಲಿ ಎಷ್ಟು ದಿನ ಇರುತ್ತಾರೆ ಎಂದು ಕೇಳಿದ್ದಕ್ಕೆ ಇನ್ನು ಒಂದೆರಡು ದಿನಗಳಲ್ಲಿ ರೆಸಾರ್ಟ್ ತೊರೆಯಲಿದ್ದಾರೆ. ಅವರು ಯಾವತ್ತಿಗೂ ಅಲ್ಲಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.

SCROLL FOR NEXT