ಸಮನ್ವಯ ಸಮಿತಿ ಸಭೆ(ಸಂಗ್ರಹ ಚಿತ್ರ)
ಬೆಂಗಳೂರು: ಆಪರೇಷನ್ ಕಮಲದ ಭೀತಿ ಹಾಗೂ ಕಾಂಗ್ರೆಸ್ ಶಾಸಕರ ಮಾರಾಮಾರಿ ಪ್ರಕರಣದ ಬೆನ್ನಲ್ಲೇ ದೋಸ್ತಿ ಸರ್ಕಾರದ ಕಾರ್ಯಸೂಚಿ ನಿಗದಿಗೊಳಿಸುವ ಮಹತ್ವದ ಸಮನ್ವಯ ಸಮಿತಿ ಸಭೆ ಗುರುವಾರ ನಡೆಯಲಿದೆ.
ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ನಾಳೆ ಸಂಜೆ ಸಭೆ ಕರೆದಿದ್ದು, ಸಭೆಯಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜನಪ್ರಿಯ ಬಜೆಟ್ ಮಂಡನೆ ಬಗ್ಗೆ ಚರ್ಚೆಸುವ ಸಾಧ್ಯತೆ ಇದೆ. ಅಂತೆಯೇ ಲೋಕಸಭಾ ಚುನಾವಣಾ ಮೈತ್ರಿ, ಸ್ಥಾನ ಹೊಂದಾಣಿಕೆ ಮತ್ತಿತರ ರಾಜಕೀಯ ವಿಚಾರಗಳ ಸಮಾಲೋಚನೆಯೂ ನಡೆಯಲಿದೆ ಎನ್ನಲಾಗಿದೆ.
ಬೆಂಗಳೂರಿನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ, ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಭಾಗವಹಿಸಲಿದ್ದಾರೆ.
ಪ್ರಮುಖವಾಗಿ ವಿಧಾನ ಮಂಡಲ ಜಂಟಿ ಅಧಿವೇಶನ ಹಾಗು ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಎದುರಾಗುವ ರಾಜಕೀಯ ಪರಿಸ್ಥಿತಿಯನ್ನು ನಿಭಾಯಿಸುವ, ರೆಸಾರ್ಟ್ ನಲ್ಲಿ ನಡೆದ ಹಲ್ಲೆ ಪ್ರಕರಣ , ಬಿಜೆಪಿ ಆಪರೇಷನ್ ಕಮಲ ಮುಂದುವರಿದರೆ ಸರ್ಕಾರದ ರಕ್ಷಣೆಗೆ ಆಪರೇಷನ್ ಹಸ್ತ ಅಥವಾ ಜೆಡಿಎಸ್ ಮಾಡುವ ಕಾರ್ಯತಂತ್ರಗಳ ಬಗ್ಗೆಯೂ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ. ಶಾಸಕರ ಗಲಾಟೆ ಪ್ರಕರಣದಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರನ್ನ ರಕ್ಷಿಸಿ, ಆನಂದ್ ಸಿಂಗ್ ಮನವೊಲಿಸಿ ಮೈತ್ರಿ ಸರ್ಕಾರಕ್ಕೆ ಧಕ್ಕೆಯುಂಟಾಗದಂತೆ ಕಾಪಾಡುವ ಲೆಕ್ಕಚಾರಗಳ ಬಗ್ಗೆಯೂ ಸಮನ್ವಯ ಸಮಿತಿ ಸದಸ್ಯರು ಚರ್ಚಿಸಲಿದ್ದಾರೆ.
ಅಂತೆಯೇ ಬಜೆಟ್ ನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಯಾವೆಲ್ಲ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು, ಹಾಲಿ ಯೋಜನೆಗಳ ಮುಂದುವರಿಕೆ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಹಂಚಿಕೆ, ಸಾಲಮನ್ನಾಕ್ಕೆ ಒಂದೇ ಭಾರಿ ಅನುದಾನ ನೀಡುವ ಮೂಲಕ ರಾಷ್ಟ್ರೀಯ ಬ್ಯಾಂಕ್ ಗಳ ಸಾಲಮನ್ನಾ ಮಾಡುವ, ಇದರಿಂದ ಇತರ ಯೋಜನೆಗಳ ಅನುದಾನ ಕಡಿತ ಮಾಡುವ ಮಾರ್ಗೋಪಾಯಗಳ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೈತ್ರಿ ಸರ್ಕಾರದ ನಾಯಕರ ವಿರುದ್ದ ಕಾಂಗ್ರೆಸ್ ಶಾಸಕರ ಅರೋಪ, ಉಳಿದ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ, ಜೆಡಿಎಸ್ ಪಾಲಿನ ಖಾಲಿ ಉಳಿದ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನ ಭರ್ತಿ ಮಾಡುವ ಕುರಿತು ಸಮಾಲೋಚನೆ ನಡೆಯಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos