ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತ ನೀಡಿದ್ದರು. ಅವರು ಈ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ನಾಯಕರು ಕೂಡ ಹೌದು. ಹೀಗಾಗಿ ಶಾಸಕರಿಗೆ ಅವರು ಮುಖ್ಯಮಂತ್ರಿ ಅನಿಸಬಹುದು ಅದರಲ್ಲಿ ತಪ್ಪೇನಿದೆ ಎಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯನವರನ್ನು ನಾವು ಮತ್ತೆ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಬಯಸುತ್ತೇವೆ ಎಂದು ನಿನ್ನೆ ಕೆಲ ಕಾಂಗ್ರೆಸ್ ಶಾಸಕರು ನೀಡಿರುವ ಪ್ರತಿಕ್ರಿಯೆ ವಿವಾದವಾಗಿದ್ದು ಇದಕ್ಕೆ ನಾನು ಸಿಎಂ ಹುದ್ದೆಗೆ ರಾಜೀನಾನೆ ನೀಡಲು ಸಿದ್ದ ಎಂದು ಹೆಚ್ ಡಿ ಕುಮಾರಸ್ವಾಮಿಯವರು ಹೇಳಿರುವುದರ ಬಗ್ಗೆ ಸುದ್ದಿಗಾರರು ಕೇಳಿದಾಗ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಹೀಗೆ.
ಕಾಂಗ್ರೆಸ್ ಶಾಸಕನಾಗಿ ಎಸ್ ಟಿ ಸೋಮಶೇಖರ್ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಸಿದ್ದರಾಮಯ್ಯ ಸಿಎಂ ಎಂದು ಅನಿಸಿರಬಹುದು. ಅದರಲ್ಲಿ ತಪ್ಪೇನಿದೆ? ನಾವೆಲ್ಲರೂ ಸಿಎಂ ಆಗಿ ಕುಮಾರಸ್ವಾಮಿಯವರ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದೇವೆ, ನಮಗೆ ಖುಷಿಯಿದೆ ಎಂದರು.