ರಾಜಕೀಯ

ರಾಜ್ಯ ರಾಜಕಾರಣಕ್ಕೆ ಗ್ರಹಣ ಹಿಡಿದು ವರ್ಷ ಕಳೆದಿದೆ: ಎಚ್ ವಿಶ್ವನಾಥ್ ಗಂಭೀರ ಆರೋಪ

Srinivas Rao BV
ನವದೆಹಲಿ: ಕರ್ನಾಟಕ  ರಾಜಕಾರಣಕ್ಕೆ ಗ್ರಹಣ ಹಿಡಿದು ವರ್ಷಗಳೇ ಕಳೆದಿದ್ದು, ಮೈತ್ರಿ ಸರ್ಕಾರವನ್ನು ರಕ್ಷಿಸುವಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಜೆಡಿಎಸ್​ ಮಾಜಿ ರಾಜ್ಯಾಧ್ಯಕ್ಷ  ಎಚ್ ವಿಶ್ವನಾಥ್ ಆರೋಪಿಸಿದ್ದಾರೆ.
ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ರಾಜ್ಯ ರಾಜಕಾರಣಕ್ಕೆ ಗ್ರಹಣ ಹಿಡಿದು ವರ್ಷಗಳೆ ಕಳೆದಿದೆ. ಮೈತ್ರಿ ಬಗ್ಗೆ ಹಲವು ನಾಯಕರು ಅಸಮಾಧಾನಗೊಂಡಿದ್ದಾರೆ. ಆದರೆ ಎರಡೂ ಪಕ್ಷಗಳ ನಾಯಕರು ಅತೃಪ್ತರನ್ನು ಸಮಾಧಾನಪಡಿಸುತ್ತಿಲ್ಲ.ಎಲ್ಲ ನಾಯಕರೂ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಮೈತ್ರಿ ಸರ್ಕಾರವನ್ನು ಕಾಪಾಡಿಕೊಳ್ಳುವಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈತ್ರಿ ಸರ್ಕಾರ ಮುಂದುವರಿಸುವ ಬಗ್ಗೆ ಆಸಕ್ತಿ ಇಲ್ಲ ಎಂದೆನಿಸುತ್ತಿದೆ.ರಾಜ್ಯದಲ್ಲಿ ಜನರು ಹಾಗೆಯೇ ಮಾತನಾಡಿಕೊಳ್ಳುತ್ತಿದ್ದಾರೆ.ಹೊಸ ಸರ್ಕಾರ ಬಂದರೆ ತಾವು ವಿರೋಧ ಪಕ್ಷದ ನಾಯಕರಾಗಬಹುದು ಎನ್ನುವ ಬಯಕೆ ಸಿದ್ದರಾಮಯ್ಯ ಅವರದ್ದಾಗಿರಬಹುದು.ಜೆಡಿಎಸ್ ಕಾಂಗ್ರೆಸ್ ನಾಯಕರಲ್ಲಿ ಸಮನ್ವಯದಲ್ಲಿ ಕೊರತೆ ಇದೆ ಎಂದು ಹೇಳಿದರು.
ರಾಜಕೀಯ ಗೊಂದಲಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಯಾರಿಗೂ ಇಷ್ಟವಿಲ್ಲ. ಮೈತ್ರಿ ನಾಯಕರೆಲ್ಲರೂ ನಿಷ್ಕ್ರಿಯರಾಗಿದ್ದಾರೆ. ಮೈತ್ರಿ ಪಕ್ಷದಲ್ಲೇ ಗೊಂದಲ ನಿರ್ಮಾಣವಾಗಿದ್ದು, ರಾಷ್ಟ್ರಮಟ್ಟದಲ್ಲಿ ನಗೆಪಾಟಲಿಗೀಡಾಗಿದ್ದೇವೆ. ಇದು ರಾಜ್ಯ ರಾಜಕಾರಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಪರೋಕ್ಷವಾಗಿ ಮೈತ್ರಿ ಸರ್ಕಾರ ಪತನದ ಸುಳಿವನ್ನು ನೀಡಿದ್ದಾರೆ ಎನ್ನಲಾಗಿದೆ.
ಎಚ್ ವಿಶ್ವನಾಥ್ ಬಿಜೆಪಿಯತ್ತ ವಾಲುತ್ತಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸಂಸದರೇ ತಮ್ಮನ್ನು ದೆಹಲಿಗೆ ಆಹ್ವಾನಿಸಿದ್ದರು. ಬಿಜೆಪಿಯ ಸಂಸದರು ತಮ್ಮ ಹಳೆಯ ಸ್ನೇಹಿತರು. ಯಾರೂ ತಮ್ಮನ್ನು ಬಿಜೆಪಿಗೆ ಆಹ್ವಾನಿಸಿಲ್ಲ. ಆದರೆ ಕರ್ನಾಟಕದಲ್ಲಿ ಎಲ್ಲರೂ ಒಂದಾಗಬೇಕು. ರಾಜ್ಯದಲ್ಲಿ ತಾವು  ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಚರ್ಚೆ ನಡೆಯುತ್ತಿದೆಯೇ ಹೊರತು ಅಭಿವೃದ್ಧಿ ಬಗ್ಗೆ ಚರ್ಚೆ ಆಗುತ್ತಿಲ್ಲ. ಬಿಜೆಪಿ ನಾಯಕರನ್ನು ಭೇಟಿಯಾದರೆ ಬಿಜೆಪಿ ಸೇರುತ್ತೇನೆ ಎಂದು ಹೇಳುವುದು ಅರ್ಥವಲ್ಲ. ಜೆಡಿಎಸ್​ ಬಿಟ್ಟು ಹೋಗುವುದಾದರೆ ಎಲ್ಲರಿಗೂ ತಿಳಿಸಿಯೇ ಹೋಗುತ್ತೇನೆ ಎಂದು ಹೇಳಿದರು.
SCROLL FOR NEXT