ರಾಜಕೀಯ

ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿಲ್ಲ: ಸಚಿವ ಯು.ಟಿ.ಖಾದರ್

Lingaraj Badiger
ಬೆಳಗಾವಿ: ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರು ಇನ್ನೂ ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ರಾಜೀನಾಮೆ ನೀಡುವುದಕ್ಕೂ ಒಂದು ಪದ್ಧತಿ, ಕ್ರಮವಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಹೇಗೆ ಸಲ್ಲಿಸಬೇಕು ಎಂಬುದನ್ನು ಕಲಿಯಬೇಕು. ನಿಯಮಾನುಸಾರ ರಾಜೀನಾಮೆ ಸಲ್ಲಿಕೆಯಾಗಬೇಕು ಎಂದರು.
ಮೈತ್ರಿ ಸರ್ಕಾರಕ್ಕೆ ಅವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖಾದರ್, ಈ ಬಗ್ಗೆ ಅವರನ್ನೇ ಕೇಳಬೇಕು. ತಮಗೆ ಗೊತ್ತಿಲ್ಲ. ರಮೇಶ್ ಜಾರಕಿಹೊಳಿ ಅವರನ್ನು ಯಾರೂ ಸಂಪರ್ಕ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇನ್ನೂ ನಾಲ್ಕು ವರ್ಷ ಸುಭದ್ರವಾಗಿರಲಿದೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸಹ ಅವರು ನಮ್ಮ ನಾಯಕರು. ರಾಜೀನಾಮೆ ವಿಚಾರ ಅವರ ದೃಢವಾದ ತೀರ್ಮಾನ. ಪಕ್ಷ ಸಂಘಟನೆಗೆ ಅವರು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿರುವುದು ದುಃಖದ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಿಡಿಕಾರಿದ ಖಾದರ್, ಮಂಗಳೂರಿನ ಅಭಿವೃದ್ಧಿಗೆ ಅವರು ಪೂರಕ ಸಲಹೆ ಸೂಚನೆಗಳನ್ನು ಕೊಡಬೇಕು. ಅದು ಬಿಟ್ಟು ಯಾವುದೋ ಪ್ರಕರಣವನ್ನು ಇಟ್ಟುಕೊಂಡು ಆರೋಪ ಮಾಡುವುದು ಸರಿಯಲ್ಲ. ಕರಂದ್ಲಾಜೆ, ಪ್ರತಿಯೊಂದು ವಿಚಾರದಲ್ಲಿ ರಾಜಕೀಯ ಮಾಡುತ್ತಾ, ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ . ಉಡುಪಿ ಜಿಲ್ಲೆಯ ಜನ ಅವರನ್ನು ನೋಡಿ ಮತ ಹಾಕಿಲ್ಲ. ಮೋದಿ ಅವರ ಹೆಸರಿನಲ್ಲಿ ಶೋಭಾ ಗೆಲುವು ಸಾಧಿಸಿದ್ದಾರಷ್ಟೆ ಎಂದರು.
SCROLL FOR NEXT