ರಾಜಕೀಯ

13 ಶಾಸಕರ ರಾಜೀನಾಮೆ, ಆಪರೇಷನ್ ರೆಸಾರ್ಟ್ ರಾಜಕೀಯ ಮುಂಬೈಗೆ ಶಿಫ್ಟ್

Lingaraj Badiger
ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ 13 ಶಾಸಕರು ಶನಿವಾರ ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ 13 ತಿಂಗಳ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಗಂಡಾಂತರ ಎದುರಾಗಿದೆ.
ಕಳೆದ ವಾರ ವಿಜಯನಗರ ನಗರದ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡುವ ಮೂಲಕ ಆರಂಭವಾಗಿದ್ದ ಆಪರೇಷನ್ ಕಮಲ ಇಂದು ನಿರ್ಣಾಯಕ ಘಟ್ಟ ತಲುಪಿದ್ದು, ಈ ಬೆಳವಣಿಗೆ ಮೈತ್ರಿ ಸರ್ಕಾರದ ಪತನಕ್ಕೆ ನಾಂದಿ ಹಾಡುವ ಸಾಧ್ಯತೆಗಳು ಹೆಚ್ಚಾಗಿವೆ.
ಎರಡೂ ಪಕ್ಷಗಳ ಅತೃಪ್ತ ಶಾಸಕರ ಗುಂಪು ಏಕಾಏಕಿ ಆರಂಭಿಸಿದ ರಾಜಕೀಯ ಕಾರ್ಯಾಚರಣೆಯಿಂದ ಮೈತ್ರಿ ಕೂಟದ ನಾಯಕರು ಥರಗುಟ್ಟುವಂತಾಗಿದ್ದು, ಸರ್ಕಾರ ಉಳಿಸಿಕೊಳ್ಳಲು ದೋಸ್ತಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ.
ಇಂದು ಒಟ್ಟು 13 ಶಾಸಕರು ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿದರು. ಬಳಿಕ 10 ಅತೃಪ್ತ ಶಾಸಕರು ರಾಜಭವನದಿಂದ ಎಚ್‌ಎಎಲ್‌ ಏರ್‌ಪೋರ್ಟ್‌ಗೆ ತೆರಳಿ, ಅಲ್ಲಿಂದ ಮುಂಬೈ ತಲುಪಿದ್ದಾರೆ. 
ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಅತೃಪ್ತ ಶಾಸಕರು ತಂಗಿದ್ದಾರೆ. ಅಲ್ಲದೆ, ಬಿಜೆಪಿ ಶಾಸಕ ಡಾ. ಅಶ್ವತ್ಥ್‌ ನಾರಾಯಣ ಅವರು ಅತೃಪ್ತ ಶಾಸಕರ ನೇತೃತ್ವ ವಹಿಸಿದ್ದಾರೆ ಎಂದು ತಿಳಿದುಬಂದಿದೆ. 
SCROLL FOR NEXT