ಬೆಂಗಳೂರು: ಸಚಿವರು ತ್ಯಾಗ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಬೇಕು, ತಾನು ಕೂಡ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ
ಬೆಂಗಳೂರಿನ ಜೆ.ಪಿ.ಭವನದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾಧಾನಿತ ಶಾಸಕರನ್ನು ಸಮಾಧಾನಪಡಿಸಲು ಸಚಿವರು ತಮ್ಮ ಸ್ಥಾನ ತ್ಯಜಿಸಬೇಕು. ವರಿಷ್ಠರು ಬಯಸಿದರೆ ತಾವು ಕೂಡ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.
ಸಿದ್ದರಾಮಯ್ಯ ಅವರನ್ನು ಬೇಕಾದರೆ ಮುಖ್ಯಮಂತ್ರಿ ಮಾಡಲಿ. ಎರಡೂ ಪಕ್ಷಗಳ ಮುಖಂಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಜಿಟಿಡಿ ತಿಳಿಸಿದರು.
ಅಮೆರಿಕಾದಿಂದ ಬೆಂಗಳೂರಿಗೆ ಸಿಎಂ ಎಚ್ ಡಿಕೆ
ಬೆಂಗಳೂರು: ಖಾಸಗಿ ಕಾರ್ಯಕ್ರಮಕ್ಕೆ ಅಮೆರಿಕಾಗೆ ತೆರ:ಳಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈಗ ಬೆಂಗಳೂರಿಗೆ ಮರಳಿದ್ದಾರೆ.
ರಾಜಕೀಯ ಕ್ಷಿಪ್ರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ನೇರವಾಗಿ ತಾಜ್ ವೆಸ್ಟ್ ಎಂಡ್ ಹೊಟೆಲ್ ಗೆ ತೆರಳಿರುವ ಕುಮಾರಸ್ವಾಮಿ ಅಲ್ಲಿ ಸರಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ವಿಶೇಷ ವಿಮಾನದ ಮೂಲಕ ಆಗಮಿಸಿದ ಕುಮಾರಸ್ವಾಮಿ ವಿಮಾನ ನಿಲ್ದಾಣದಲ್ಲೇ ಸೋದರ ಎಚ್.ಡಿ. ರೇವಣ್ಣ ಸೇರಿದಂತೆ ಹಲವು ನಾಯಕರ ಜತೆ ಮಾತುಕತೆ ನಡೆಸಿದ್ದಾರೆ.