ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರದಲ್ಲಿ ಶಾಸಕರು ರಾಜೀನಾಮೆ ಸಲ್ಲಿಸಿರುವುದರಿಂದ ಸರ್ಕಾರದ ಭವಿಷ್ಯ ಅನಿಶ್ಚಿತತೆಯಲ್ಲಿದ್ದು, ಈ ಮಧ್ಯೆ ಮಂಗಳವಾರ ಬೆಂಗಳೂರಿನ ವಿಧಾನ ಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ಸ್ವಲ್ಪ ಹೊತ್ತಿಗೆ ಮೊದಲು ಮುಕ್ತಾಯವಾಗಿದೆ.
ನಾಡಿದ್ದು 12ರಂದು ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು ಅದಕ್ಕಿಂತ ಮೊದಲು ಇಂದು ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಹಳ ಮಹತ್ವ ಪಡೆದಿದೆ.
ಶಾಸಕರ ಸಾಮೂಹಿಕ ರಾಜೀನಾಮೆ ಮಧ್ಯೆ 13 ತಿಂಗಳ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಕಾರ್ಯತಂತ್ರಗಳ ಬಗ್ಗೆ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ನಾಯಕರು ಚರ್ಚೆ ನಡೆಸಿದ್ದಾರೆ.
ಈ ಮಧ್ಯೆ ವಸತಿ ಖಾತೆ ಸಚಿವ ಎನ್ ನಾಗರಾಜು ಎಂ ಟಿ ಬಿ, ಅನಾರೋಗ್ಯ ನಿಮಿತ್ತ ಇಂದು ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗುತ್ತಿಲ್ಲ ಎಂದು ಪಕ್ಷದ ಅಧ್ಯಕ್ಷರಿಗೆ ಪತ್ರ ಕಳುಹಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸದ್ಯ ಉಂಟಾಗಿರುವ ಬಿಕ್ಕಟ್ಟು ಶಮನವಾಗಲಿದ್ದು ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಇಂದು ಕೂಡ ಹೇಳಿಕೆ ನೀಡುತ್ತಿದ್ದಾರೆ.
ಎರಡೂ ಪಕ್ಷಗಳ ಸಚಿವರು ರಾಜೀನಾಮೆ ನೀಡಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಚಿವ ಸಂಪುಟ ಪುನರ್ರಚನೆಗೆ ಮುಕ್ತ ಅವಕಾಶ ನೀಡಿ ಅತೃಪ್ತ ಶಾಸಕರಿಗೆ ಅವಕಾಶ ನೀಡಲು ಹಾದಿ ಮಾಡಿಕೊಟ್ಟಿದ್ದಾರೆ. ಸ್ಪೀಕರ್ ಸಚಿವರುಗಳ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ.