ಬೆಂಗಳೂರು: ಶಾಸಕರಿಗೆ ವಿಧಾನಸೌಧದಲ್ಲೇ ರಕ್ಷಣೆ ಇಲ್ಲದಂತಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಬಿಜೆಪಿ ಶಾಸಕ ಸಿ ಟಿ ರವಿ ರಾಜ್ಯಪಾಲರಿಗೆ ಆಗ್ರಹಿಸಿದ್ದಾರೆ.
ಇಂದು ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲೆ ಗೂಂಡಾಗಿರಿ ನಡೆಯುತ್ತಿದೆ. ರಾಜೀನಾಮೆ ನೀಡುವ ಅಧಿಕಾರ ಶಾಸಕರಿಗೆ ಇದೆ. ಆದರೆ ಅವರನ್ನು ವಿಧಾನಸೌಧದ ಮೂರನೇ ಮಹಡಿಯ ಮಂತ್ರಿಗಳ ಕಚೇರಿಯಲ್ಲಿ ಕೂಡಿ ಹಾಕಿದ್ದಾರೆ. ಅದು ಕಾಂಗ್ರೆಸ್ ಕಚೇರಿಯಲ್ಲ. ರಾಜ್ಯದ ಜನ ಇದನ್ನೆಲ್ಲ ನೋಡಿದ್ದಾರೆ. ಕಾಂಗ್ರೆಸ್ನ ಗೂಂಡಾ ನಡೆಯನ್ನು ಜನರು ನೋಡುತ್ತಿದ್ದಾರೆ. ಸರ್ಕಾರ ಬಿದ್ದರೆ ಕಾಂಗ್ರೆಸ್ನ ಎಟಿಎಂ ಬಂದ್ ಆಗಲಿದೆ ಎಂಬ ಭಾವನೆಯಿಂದ ಕೀಳು ಮಟ್ಟದ ರಾಜಕಾರಣಕ್ಕೆ ಕೈಹಾಕಿದ್ದಾರೆ. ಇಂಥ ಅರಾಜಕತೆಯನ್ನು ರಾಜ್ಯಪಾಲರು ತಡೆಯಬೇಕು ಎಂದು ಒತ್ತಾಯಿಸಿದರು.
ಇಂದು ಕಾಂಗ್ರೆಸ್ ಶಾಸಕ ಸುಧಾಕರ್ ಅವರೇ ಬಂದು ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರೇ ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ಸ್ಪೀಕರ್ ಭೇಟಿ ಮಾಡಿ ಹೊರಗೆ ಹೋಗುವ ಸಂದರ್ಭದಲ್ಲಿ ಅವರನ್ನು ಹಿಡಿದು ತಳ್ಳಾಡಿ ಕೊಠಡಿಯಲ್ಲಿ ಕೂಡಿ ಹಾಕಲಾಗಿದೆ. ಸುಧಾಕರ್ ಪತ್ನಿ ನಮಗೆ ದೂರವಾಣಿ ಕರೆ ಮಾಡಿ ಪತಿಯ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ನಾವು ರಾಜಕೀಯವಾಗಿ ಬೇರೆ ಬೇರೆ ಪಕ್ಷದವರಾದರೂ ಸ್ನೇಹಿತರೇ. ಹಾಗಾಗಿ ನಮಗೆ ಕರೆ ಮಾಡಿ ಮನವಿ ಮಾಡಿದ್ದಾರೆ ಎಂದರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics