ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದು, ಜುಲೈ 17ಕ್ಕೆ ಸಮಯ ನಿಗದಿ ಮಾಡಿದ್ದು, ಅಲ್ಲಿಯವರೆಗೂ ಶಾಸಕರ ರಾಜಿನಾಮೆ ಅಂಗೀಕರಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತಂತೆ ಬೆಂಗಳೂರಿನಲ್ಲಿ ವಿಧಾನಸೌಧದ ಕಚೇರಿಯಲ್ಲಿ ಮಾತನಾಡಿದ ಅವರು, ಶಾಸಕರು ರಾಜಿನಾಮೆ ನೀಡಿದ್ದಾರೆ ನಿಜ.. ಆದರೆ ಅವುಗಳ ಅಂಗೀಕಾರ ಪ್ರಕ್ರಿಯೆ ಸುಲಭವಲ್ಲ. ರಾತ್ರೋರಾತ್ರಿ ಮಾಡುವ ಪ್ರಕ್ರಿಯೆ ಅಲ್ಲ. ಅವುಗಳ ಪರಿಶೀಲನೆ ನಡೆಸಬೇಕು. ಈ ಕುರಿತ ನಿಯಮಾವಳಿಗಳನ್ನು ಪರಿಶೀಲಿಸಿ ಅವುಗಳ ಪ್ರಕಾರವೇ ನಡೆದುಕೊಳ್ಳಬೇಕು. ಇವೆಲ್ಲದಕ್ಕೂ ಒಂದು ಸಂವಿಧಾನಬದ್ಧ ಪ್ರಕ್ರಿಯೆ ಇದೆ. ಅದರ ಮೂಲಕವೇ ನಾನು ನಿರ್ಧರಿಸುತ್ತೇನೆ ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮತ್ತೆ ಇಬ್ಬರು ಶಾಸಕರ ರಾಜಿನಾಮೆ
ಏತನ್ಮಧ್ಯೆ ಕಾಂಗ್ರೆಸ್ ನಲ್ಲಿ ಬಂಡಾಯ ನಾಯಕರ ಸಂಖ್ಯೆ ಮತ್ತೆ ಹೆಚ್ಚಾಗಿದ್ದು, ಇದೀಗ ಮತ್ತೆ ಇಬ್ಬರು ಶಾಸಕರು ರಾಜಿನಾಮೆ ನೀಡಿದ್ದಾರೆ. ಇಂದು ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಹಾಗೂ ಸಿದ್ದರಾಮಯ್ಯ ಬಲಗೈ ಬಂಟ ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮೈತ್ರಿ ನಾಯಕರಿಗೆ ಶಾಕ್ ನೀಡಿದ್ದಾರೆ.
ಸಿದ್ದರಾಮಯ್ಯ ಎಚ್ಚರಿಕೆಗೂ ಜಗ್ಗದ ಈ ಶಾಸಕರು ಇಂದು ಸ್ಪೀಕರ್ ರಮೇಶ್ ಕುಮಾರ್ ಕಚೇರಿ ಬಂದು ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಇದಾದ ಬಳಿಕ ಅವರು ಮುಂಬೈನಲ್ಲಿನ ಅತೃಪ್ತರ ತಂಡ ಸೇರಲಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯ ನಡುವೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಪ್ರಿಯಾಂಕ್ ಖರ್ಗೆ ಮತ್ತಿತರ ಕಾಂಗ್ರೆಸ್ ಮುಖಂಡರು ಸುಧಾಕರ್ ಗೆ ಸ್ಪೀಕರ್ ಕಚೇರಿಯ ಮುಂದೆಯೇ ತರಾಟೆ ತೆಗೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics