ರಾಜಕೀಯ

ವಿಧಾನಸೌಧದಲ್ಲಿ ಹೈಡ್ರಾಮ: ಶಾಸಕ ಡಾ.ಸುಧಾಕರ್ ಮನವೊಲಿಕೆ ಯತ್ನ ವಿಫಲ: ಪೊಲೀಸ್ ಭದ್ರತೆಯಲ್ಲಿ ಹೊರಬಂದ ಶಾಸಕ

Srinivas Rao BV
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ನ ಡಾ.ಜೆ ಸುಧಾಕರ್ ಅವರನ್ನು ಮನವೊಲಿಸುವುದಕ್ಕಾಗಿ ಕಾಂಗ್ರೆಸ್ ನಾಯಕರು ಅವರನ್ನು ಒತ್ತಾಯಪೂರ್ವಕವಾಗಿ ಎಳೆದೊಯ್ದು ವಿಧಾನಸೌಧದಲ್ಲಿ ಹೈಡ್ರಾಮ ನಡೆದಿದೆ. 

ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುಧಾಕರ್ ರಾಜೀನಾಮೆ ನೀಡುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಪ್ರಿಯಾಂಕ್ ಖರ್ಗೆ ಸುಧಾಕರ್ ಅವರನ್ನು ಮನವೊಲಿಸಲು ಒತ್ತಾಯಪೂರ್ವಕವಾಗಿ ಕೆ.ಜೆ ಜಾರ್ಜ್ ಅವರ ಕೊಠಡಿಗೆ ಎಳೆದು ಕರೆದೊಯ್ದರು. ಸಿದ್ದರಾಮಯ್ಯ ಅವರು ಆಗಮಿಸಿ ಸುಧಾಕರ್ ಮನವೊಲಿಕೆಗೆ ಯತ್ನಿಸಿದರಾದರೂ ಅದು ಯಶಸ್ವಿಯಾಗಲಿಲ್ಲ. ಈ ವೇಳೆ ಸುಧಾಕರ್ ಅವರನ್ನು ಬಿಟ್ಟು ಕಳಿಸುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಿಧಾನಸೌಧದಲ್ಲಿ ವಾಗ್ವಾದ ನಡೆದಿದೆ. 

ರಾಜಕೀಯ ನಾಯಕರ ನಡುವೆ ಗದ್ದಲ-ಗಲಾಟೆ ವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇ ವಿಧಾನಸೌಧಕ್ಕೆ ಆಗಮಿಸಿದ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿದ್ದರು. ಸಂಧಾನ ಮಾತುಕತೆ ವಿಫಲಗೊಂಡ ಹಿನ್ನೆಲೆಯಲ್ಲಿ ಶಾಸಕ ಸುಧಾಕರ್ ಪೊಲೀಸ್ ಭದ್ರತೆಯಲ್ಲಿ ಜಾರ್ಜ್ ಕೊಠಡಿಯಿಂದ ಹೊರಬಂದು ರಾಜಭವನಕ್ಕೆ ತೆರಳಿದ್ದಾರೆ. 
SCROLL FOR NEXT