ಬಜೆಟ್ ಅಧಿವೇಶನಕ್ಕೆ ಸಿಬ್ಬಂದಿಯ ತಯಾರಿ
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆಯ ನಡುವೆಯೇ ವಿಧಾನಸಭೆಯಲ್ಲಿ ಶುಕ್ರವಾರ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಅಲ್ಪಮತಕ್ಕೆ ಇಳಿದಿರುವ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಸಜ್ಜಾಗಿದೆ.
ಕಲಾಪದ ಆರಂಭದ ದಿನವಾದ ಇಂದು ವಿಧಾನಸಭೆಯಲ್ಲಿ ತೀವ್ರ ಗದ್ದಲ-ಕೋಲಾಹಲ ಏರ್ಪಡುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಜೀನಾಮೆಗೆ ಬಿಜೆಪಿ ನಾಯಕರು ಪಟ್ಟು ಹಿಡಿಯಲಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ಬರಗಾಲವಿದ್ದರೂ ಕೂಡ ಮೈತ್ರಿ ಸರ್ಕಾರದಲ್ಲಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ನ ನಾಯಕರು ತಮ್ಮದೇ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದೆ. ಇದರ ಮಧ್ಯೆ ಹಣಕಾಸು ಮಸೂದೆಯನ್ನು ಸದನದಲ್ಲಿ ಇಂದು ಮಂಡಿಸಲು ಸರ್ಕಾರ ಮುಂದಾಗಿದೆ. ರಾಜ್ಯಪಾಲರು ಆದೇಶಿಸಿದರೆ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಶ್ವಾಸಮತ ಯಾಚಿಸಲಿದ್ದಾರೆ.
ಅತೃಪ್ತ ಬಂಡಾಯ ಶಾಸಕರನ್ನು ಮತ್ತೆ ಪಕ್ಷಕ್ಕೆ ಕರೆತರುವಲ್ಲಿ ಸಿಎಂ ಕುಮಾರಸ್ವಾಮಿ ವಿಫಲವಾದರೆ 13 ತಿಂಗಳ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಕೊನೆದಿನಗಳು ಎಣಿಸುವ ಪರಿಸ್ಥಿತಿ ಬರುತ್ತದೆ. ಇಂದು ಸದನದಲ್ಲಿ ಸಿಎಂ ಕುಮಾರಸ್ವಾಮಿ ಬಂಡಾಯ ಶಾಸಕರ ಮುಂದೆ ಕಣ್ಣೀರು ಹರಿಸುವ ಸಾಧ್ಯತೆಯಿದೆ, ಇನ್ನೊಂದೆಡೆ ಮೈತ್ರಿಕೂಟದ ಶಾಸಕರು ತಮಗೆ ಶತ್ರುವಾಗಿ ಬೆನ್ನ ಹಿಂದೆ ಚೂರಿ ಹಾಕಿದರು. ಬಿಜೆಪಿ ನಾಯಕರು ಆರಂಭದಿಂದಲೂ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಲೇ ಬಂದಿದ್ದಾರೆ ಎಂದು ಭಾವನಾತ್ಮಕ ಭಾಷಣವನ್ನು ಮಾಡಬಹುದು.
ಇಂದು ಸರ್ಕಾರ ಮಂಡಿಸುವ ಹಣಕಾಸು ಮಸೂದೆ ಮೇಲೆ ಮುಖ್ಯವಾಗಿ ಗಮನ ಕೇಂದ್ರೀಕೃತವಾಗಿದೆ. ಈ ಮಧ್ಯೆ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ಸುತ್ತಮುತ್ತ ತೀವ್ರ ಭದ್ರತೆ ಒದಗಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos