ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ನಾಳೆ ಭಾರತೀಯ ಜನತಾ ಪಕ್ಷದ ಶಾಸಕರು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಸದನದಲ್ಲಿ ವಿಶ್ವಾಸಮತ ಕೇಳುವಂತೆ ಒತ್ತಾಯಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನಾಳೆ ಬೆಳಗ್ಗೆ ನಡೆಯುವ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿಗಳ ಬದ್ಧತೆಯನ್ನು ಈಡೇರಿಸಬೇಕೆಂದು ನಾವು ಸಲಹೆ ನೀಡುತ್ತೇವೆ ಎಂದು ಹೇಳಿದರು.
ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಶಾಸಕರ ರಾಜೀನಾಮೆ ಮಧ್ಯೆ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವುದು ಉತ್ತಮ ಎಂದರು.
ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಮುಂದುವರೆದಿದೆ. ವಿಶ್ವಾಸಮತ ಯಾಚನೆಗೆ ನಾಳೆ ತಮ್ಮ ಪಕ್ಷ ಸರ್ಕಾರವನ್ನು ಒತ್ತಾಯಿಸಲಿದೆ. ನಾಳೆ ನಡೆಯಲಿರುವ ಆರ್ಥಿಕ ಸಲಹಾ ಸಮಿತಿ ಸಭೆಯ ವೇಳೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಹುಮತ ಸಾಬೀತಿಗಾಗಿ ವಿಶ್ವಾಸಮತ ಕೋರಬೇಕು ಎಂಬುದರ ಕುರಿತು ಸಭಾಧ್ಯಕ್ಷರಿಗೆ ಮನವಿ ಮಾಡಲಾಗುವುದು ಎಂದರು.