ಎಸ್.ಎಂ ಕೃಷ್ಣ ಮತ್ತು ಶ್ರೀನಿವಾಸ್ ಪ್ರಸಾದ್
ಮಂಡ್ಯ: ಮಾಜಿ ಸಿಎಂ ಎಸ್ ಎಂ.ಕೃಷ್ಣ ಅವರ ರಾಜಕೀಯ ಜೀವನ ಮುಗಿದ ಅಧ್ಯಾಯವಾಗಿದೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಅವರು, ಕೃಷ್ಣ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡಬಾರದಿತ್ತು. ಆ ಪಕ್ಷ ಬಿಟ್ಟ ಬಳಿಕ ರಾಜಕೀಯ ನಿವೃತ್ತಿಯನ್ನು ಪಡೆಯಬೇಕಿತ್ತು ಎಂದು ಹೇಳಿದರು. ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಸೇರಿದ ನಂತರ ರಾಜಕೀಯವಾಗಿ ಬೆಳವಣಿಗೆ ಕಂಡರು.
ಕೆಪಿಸಿಸಿ ಅಧ್ಯಕ್ಷ, ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಪಕ್ಷದಿಂದ ಎಲ್ಲಾ ಅಧಿಕಾರವನ್ನೂ ಅನುಭವಿಸಿದ್ದಾರೆ. ಆದರೆ, ಕಾಂಗ್ರೆಸ್ ತೊರೆಯುವ ನಿರ್ಧಾರ ಕೈಗೊಂಡ ಬಳಿಕ ಅವರ ರಾಜಕೀಯ ಜೀವನ ಅಂತ್ಯಗೊಂಡಿದೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಹಾಸನಕ್ಕಿಂತಲೂ ಮಂಡ್ಯದಲ್ಲಿ ತಳಮಟ್ಟದಿಂದ ಜೆಡಿಎಸ್ ಗಟ್ಟಿಯಾಗಿದೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಮಟ್ಟದಲ್ಲೂ ಪಕ್ಷದ ಜನಪ್ರತಿನಿಧಿಗಳಿದ್ದಾರೆ.
ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿತ್ತು. ಆ ಪಕ್ಷದ ಶಾಸಕರು- ಮುಖಂಡರೇ ನಾಲಗೆ ಹರಿಯಬಿಟ್ಟು ತಮ್ಮ ಭದ್ರಕೋಟೆಯನ್ನು ಹಾಳುಮಾಡಿಕೊಂಡಿದ್ದಾರೆ. ಇದಕ್ಕೆ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಲತಾ ಗೆದ್ದಿರುವುದೇ ಸಾಕ್ಷಿಯಾಗಿದೆ. ಇದು ಕೇವಲ ಜೆಡಿಎಸ್ ಪಕ್ಷಕ್ಕೆ ಮಾತ್ರವಲ್ಲ, ಎಲ್ಲಾ ರಾಜಕೀಯ ಪಕ್ಷಗಳಿಗೂ ತಕ್ಕ ಪಾಠ ಎಂದು ಹೇಳಿದ್ದಾರೆ.