ರಾಜಕೀಯ

ಅತೃಪ್ತ ಶಾಸಕರ ಕುರಿತ ಸುಪ್ರೀಂ ತೀರ್ಪು ಒಂದು ಕೆಟ್ಟ ಉದಾಹರಣೆಯಾಗಲಿದೆ: ಕಾಂಗ್ರೆಸ್

Lingaraj Badiger
ನವದೆಹಲಿ: ಕರ್ನಾಟಕದ ಮೈತ್ರಿ ಸರ್ಕಾರದ 15 ಅತೃಪ್ತ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಬುಧವಾರ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು 'ಘೋರ ನ್ಯಾಯಾಂಗ ದೃಷ್ಟಾಂತ(ಕೆಟ್ಟ ಉದಾಹರಣೆ)'ವಾಗಲಿದೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಬಂಡಾಯ ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ ಎಂದು ಹೇಳುವ ಮೂಲಕ ಜನಾದೇಶಕ್ಕೆ ವಿರುದ್ಧವಾಗಿ ನಡೆದುಕೊಂಡ ಶಾಸಕರ ರಕ್ಷಣೆಗೆ ನಿಂತಿದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲ ಅವರು ಟ್ವೀಟ್ ಮಾಡಿದ್ದಾರೆ.
ಜನಾದೇಶ ಧಿಕ್ಕರಿಸುವ ಶಾಸಕರ ವಿರುದ್ಧ ಕ್ರಮಕೈಗೊಳ್ಳಲು ಸಂವಿಧಾನದ ಕಲಂ 10ರಲ್ಲಿ ವಿಪ್ ಗೆ ಅವಕಾಶ ನೀಡಲಾಗಿದೆ. ಆದರೆ ಸುಪ್ರೀಂ ಕೋರ್ಟ್ ಈಗ ವಿಪ್ ಅನ್ನೇ ಅಮಾನ್ಯಗೊಳಿಸಿದ್ದು, ಇದೊಂದು ಕೆಟ್ಟ ಉದಾಹರಣೆಯಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯದ 15 ಬಂಡಾಯ ಶಾಸಕರ ರಾಜೀನಾಮೆ ಸಂಬಂಧ ನಿಗದಿತ ಕಾಲಮಿತಿಯೊಳಗೆ ನಿರ್ಧಾರ ಪ್ರಕಟಿಸುವಂತೆ ಸ್ಪೀಕರ್ ಗೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ. ಆದರೆ, ಗುರುವಾರ ನಡೆಯಲಿರುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸದನದಲ್ಲಿ ಹಾಜರಿರುವಂತೆ ಅತೃಪ್ತ ಶಾಸಕರನ್ನು ಒತ್ತಾಯಿಸಲು ಕೂಡ ಅವಕಾಶವಿಲ್ಲ ಎಂದು ತಿಳಿಸಿದೆ.
ಈ ಬೆಳವಣಿಗೆ ಅತೃಪ್ತ ಬಣಕ್ಕೆ ಅನುಕೂಲಕರವಾಗಿದ್ದು, ಮೈತ್ರಿ ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರ ಸಂಸದೀಯ ಅನುಭವಕ್ಕೆ ಈ ತೀರ್ಪು ಸವಾಲಾಗಿ ಪರಿಣಮಿಸಿದೆ. ಇದೀಗ ಸ್ಪೀಕರ್ ಕೈಗೊಳ್ಳುವ ನಿರ್ಧಾರ ಮೈತ್ರಿ ಸರ್ಕಾರದ ಅಳಿವು- ಉಳಿವನ್ನು ನಿರ್ಧರಿಸಲಿದೆ. 
SCROLL FOR NEXT