ರಾಜಕೀಯ

ಸ್ನೇಹ ರಾಜಕೀಯವನ್ನು ಮೀರಿದ್ದು ಎಂದು ಬಿಜೆಪಿ ಶಾಸಕರ ಜೊತೆ ಉಪಾಹಾರ ಸವಿದ ಡಿಸಿಎಂ ಪರಮೇಶ್ವರ್!

Sumana Upadhyaya
ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿಶ್ವಾಸ ಮತಯಾಚನೆ ಮುಂದೂಡಿದ್ದನ್ನು ಪ್ರತಿಭಟಿಸಿ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಿಧಾನಸೌಧದ ಪಡಸಾಲೆಯಲ್ಲಿ ನಿನ್ನೆಯಿಂದ ಧರಣಿ ನಡೆಸುತ್ತಿದ್ದಾರೆ. 
ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಶಾಸಕರು ವಿಧಾನಸಭೆ ಮೊಗಸಾಲೆಯಲ್ಲಿ ನಿನ್ನೆಯಿಂದ ಧರಣಿ ನಡೆಸುತ್ತಾ ಅಲ್ಲಿಯೇ ರಾತ್ರಿ ಭೋಜನ ಮಾಡಿ ನಿದ್ರೆಗೆ ಜಾರಿದರು. 
ಇಂದು ಬೆಳಗ್ಗೆ ಎದ್ದ ಶಾಸಕರುಗಳ ಕುಶಲೋಪರಿ, ಆರೋಗ್ಯ ವಿಚಾರಿಸಲೆಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅಲ್ಲಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರು ನಿನ್ನೆ ರಾತ್ರಿಯಿಂದ ಇಲ್ಲೇ ಇದ್ದಾರೆ. ಅವರು ಧರಣಿ ನಡೆಸಿದ್ದರೊ ಅಥವಾ ನಿದ್ದೆ ಮಾಡಿದ್ದರೊ ನನಗೆ ಗೊತ್ತಿಲ್ಲ, ಆದರೆ ಅವರಿಗೆ ಊಟ-ತಿಂಡಿ ವ್ಯವಸ್ಥೆ ಮಾಡುವುದು ಅವರ ಬೇಕು ಬೇಡಗಳನ್ನು ಕೇಳುವುದು ನಮ್ಮ ಕರ್ತವ್ಯ. ಕೆಲವು ಶಾಸಕರಿಗೆ  ಬಿ.ಪಿ, ಡಯಾಬಿಟಿಸ್ ಇದೆ, ಹಾಗಾಗಿ ವೈದ್ಯರನ್ನು, ಆಂಬ್ಯುಲೆನ್ಸ್ ನ್ನು ಕೂಡ ಇಲ್ಲಿಗೆ ಕರೆಸಿದ್ದೆವು ಎಂದರು.
ಇಲ್ಲಿಗೆ ಬಂದಾಗ ಶಾಸಕ ಸುರೇಶ್ ಕುಮಾರ್ ತಿಂಡಿ ಬಹಳ ಚೆನ್ನಾಗಿದೆ, ಉಪಾಹಾರ ಸೇವಿಸಿ ಎಂದು ಹೇಳಿದರು. ಅವರು ನನಗೆ ಬಹಳ ಆತ್ಮೀಯರು, ಬೇರೆ ಶಾಸಕರುಗಳ ಜೊತೆ ಸಹ ನಮಗೆ ಒಡನಾಟವಿದೆ. ಇದು ರಾಜಕೀಯವನ್ನು ಮೀರಿದ ಸ್ನೇಹ, ನಾವು ಒಳಗಡೆ ಸದನದಲ್ಲಿ ರಾಜಕೀಯ ವಿಚಾರವಾಗಿ ಏನೇ ಚರ್ಚೆ ಮಾಡಿಕೊಂಡರೂ, ಭಿನ್ನ ಭಿನ್ನ ರೀತಿಯಲ್ಲಿ ವರ್ತಿಸಿಕೊಂಡರೂ ಸಹ ಹೊರಗೆ ಬಂದ ನಂತರ ನಾವೆಲ್ಲರೂ ಸ್ನೇಹಿತರು, ಮಾನವೀಯತೆ ದೃಷ್ಟಿಯಿಂದ ನಾವೆಲ್ಲಾ ನಡೆದುಕೊಳ್ಳುತ್ತೇವೆ, ಅದು ಪ್ರಜಾಪ್ರಭುತ್ವದಲ್ಲಿ ಬಹಳ ಮುಖ್ಯ ಕೂಡ, ಇದನ್ನೇ ಪ್ರಜಾಪ್ರಭುತ್ವದ ಸೌಂದರ್ಯ ಎನ್ನುವುದು ಎಂದು ಪರಮೇಶ್ವರ್ ಬಣ್ಣಿಸಿದರು.
SCROLL FOR NEXT