ರಾಜಕೀಯ

ನಾನು ಬಿಜೆಪಿ ನಾಯಕರಿಂದ ಅಪಹರಣಕ್ಕೆ ಒಳಗಾಗಿಲ್ಲ- ಶಾಸಕ ಶ್ರೀಮಂತ್ ಪಾಟೀಲ್

Sumana Upadhyaya
ಬೆಂಗಳೂರು: ನಾನು ಬಿಜೆಪಿ ನಾಯಕರಿಂದ ಅಪಹರಣಕ್ಕೆ ಒಳಗಾಗಿಲ್ಲ. ಸದನಕ್ಕೆ ಗೈರಾಗಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ, ವೈದ್ಯಕೀಯ ತಪಾಸಣೆಗೆ ಮುಂಬೈಗೆ ಬಂದಿರುವುದಾಗಿ ಕಾಗವಾಡದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಸ್ಪೀಕರ್ ಕಚೇರಿಗೆ ಇಂದು ಇ ಮೇಲ್ ಪತ್ರ ಕಳುಹಿಸಿರುವ ಅವರು ಮುಂಬೈಗೆ ಹೋಗಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪತ್ರವನ್ನು ವಿಧಾನಸಭೆಯ ಕಲಾಪದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಸದಸ್ಯರ ಮುಂದೆ ಓದಿದರು.
ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದ ಬೆಂಗಳೂರಿನ ಪ್ರಕೃತಿ ರೆಸಾರ್ಟ್ ನಿಂದ ಮೊನ್ನೆ ರಾತ್ರೋರಾತ್ರಿ ಶಾಸಕ ಶ್ರೀಮಂತ್ ಪಾಟೀಲ್ ನಾಪತ್ತೆಯಾಗಿದ್ದರು. ನಂತರ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡುವ ಸಂದರ್ಭದಲ್ಲಿ ಬಹಿರಂಗವಾಗಿದ್ದು.
ಶಾಸಕ ಪಾಟೀಲ್ ಅವರನ್ನು ಬಿಜೆಪಿ ನಾಯಕರು ಅಪಹರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿ ನಿನ್ನೆ ಸದನದಲ್ಲಿ ತೀವ್ರ ಗದ್ದಲ ಏರ್ಪಾಡಾಗಿತ್ತು. ಈ ಸಂಬಂಧ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿ ಇಂದು ಪೊಲೀಸರು ಪಾಟೀಲ್ ಅವರ ಹೇಳಿಕೆ ಪಡೆಯಲು ಮುಂಬೈಗೆ ಹೋಗಿದ್ದರು.
ಆದರೆ ಇಂದು ಎಲ್ಲದಕ್ಕೂ ತೆರೆ ಎಳೆದಿರುವ ಶಾಸಕ ಪಾಟೀಲ್ ನಾನು ಮೊನ್ನೆ ರಾತ್ರಿ ಚೆನ್ನೈಗೆ ಹೋಗಿದ್ದೆ. ಅಲ್ಲಿ ನನ್ನ ಪರಿಚಯಸ್ಥರ ಮೂಲಕ ವೈದ್ಯಕೀಯ ತಪಾಸಣೆಗೆಂದು ಮುಂಬೈಯ ಸೈಂಟ್ ಜಾರ್ಜ್ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ,
ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸಂದರ್ಭದಲ್ಲಿ ಸದನದಲ್ಲಿ ನನ್ನ ಅನುಪಸ್ಥಿತಿಯನ್ನು ಸ್ಪೀಕರ್ ಗಮನಕ್ಕೆ ತರುತ್ತಿದ್ದೇನೆ, ನನ್ನ ಬಗ್ಗೆ ನಿನ್ನೆ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ನಿಜವಲ್ಲ ಎಂದು ಪಾಟೀಲ್ ಇಮೇಲ್ ಪತ್ರದಲ್ಲಿ ಸ್ಪಷ್ಟನೆ ನೀಡಿದ್ದಾರೆ.
SCROLL FOR NEXT