ರಾಜಕೀಯ

ಎಸ್.ಟಿ.ಸೋಮಶೇಖರ್ ಹೇಳಿದ್ದು ನಿಜ: ನಾನು ಡಿಸಿಎಂ ಹುದ್ದೆ ಮೇಲೆ ಆಸೆಯಿಲ್ಲ: ರಾಮಲಿಂಗಾರೆಡ್ಡಿ

Shilpa D
ಬೆಂಗಳೂರು: ನನಗೆ ಯಾವುದೇ ಹುದ್ದೆ ಬೇಡ, ಉಪಮುಖ್ಯಮಂತ್ರಿ ಹುದ್ದೆ ಮೇಲೆ ನನಗೆ ಆಸೆಯಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಖಡಾಖಂಡಿತವಾಗಿ ಹೇಳಿದ್ದಾರೆ. 
ದೇವೇಗೌಡರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ನನಗೆ ಉಪ ಮುಖ್ಯಮಂತ್ರಿ ಹುದ್ದೆ ಬೇಡ. ದೇವೇಗೌಡರ ಜೊತೆ ನಡೆಸಿದ ಮಾತುಕತೆಯಲ್ಲಿ ಡಿಸಿಎಂ ಹುದ್ದೆಯ ಬಗ್ಗೆ ಚರ್ಚೆ ನಡೆದಿಲ್ಲ. ಇದೊಂದು ಸೌಜನ್ಯದ ಭೇಟಿ ಅಷ್ಟೇ. ರಾಜಕೀಯದಲ್ಲಿರುವಾಗ ದೇವೇಗೌಡರನ್ನು ಆಗಾಗ ಭೇಟಿಯಾಗುತ್ತಿರುತ್ತೇನೆ. ಹಾಗೆಯೇ ಇಂದು ಕೂಡ ಭೇಟಿಯಾಗಿದ್ದೇನೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಂಬೈಯಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರನ್ನು ರಾಮಲಿಂಗಾ ರೆಡ್ಡಿ ಅವರ ಮೂಲಕ ಸಂಪರ್ಕಿಸುವ ಪ್ರಯತ್ನವನ್ನು ದೇವೇಗೌಡರು ಮಾಡಿದರು. ಆದರೆ ಅತೃಪ್ತ ಶಾಸಕರು ರೆಡ್ಡಿ ಅವರ ಮೊಬೈಲ್ ಕರೆ ಸ್ವೀಕರಿಸದ ಕಾರಣ ಈ ಪ್ರಯತ್ನವೂ ವಿಫಲವಾಗಿದೆ ಎಂದು ಮೂಲಗಳು ತಿಳಿಸಿವೆ.
ಅತೃಪ್ತ ಶಾಸಕ ಸೋಮಶೇಖರ್ ಅವರು ನನ್ನ ಬಗ್ಗೆ ಹೇಳಿದ್ದು ನಿಜ. ನಾನು, ಸೋಮಶೇಖರ್ ಹಾಗೂ ವಿಶ್ವನಾಥ್ ಅವರು ಮೂವರೂ ಸೇರಿ ಮಾತನಾಡಿಕೊಂಡು ಯಾವುದೇ ಒತ್ತಡ ಬಂದರೂ, ನಮ್ಮ ರಾಜೀನಾಮೆಯನ್ನು ವಾಪಸ್ ಪಡೆಯಬಾರದು ಎಂಬ ತಿರ್ಮಾನಕ್ಕೆ ಬಂದಿದ್ದೆವು. 
ಆದರೆ ಅಷ್ಟು ಜನ ಮುಖಂಡರು ಬಂದು ಒತ್ತಡ ಹಾಕಿದ್ದರಿಂದ ರಾಜೀನಾಮೆ ಹಿಂಪಡೆಯಬೇಕಾಯಿತು. ಭಾನುವಾರ ರಾಜೀನಾಮೆ ವಾಪಸ್ ಪಡೆಯಬೇಕೆಂದು ನಿರ್ಧಾರ ಮಾಡಿದ ನಂತರ ಯತ್ನಿಸಿದೆ. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.
SCROLL FOR NEXT