ಸಾರಾ ಮಹೇಶ್, ಎಚ್ ವಿಶ್ವನಾಥ್
ಮೈಸೂರು: ನಿಮಗೆ ಮಂತ್ರಿ ಸ್ಥಾನವೂ ಬೇಕಾಗಿಲ್ಲ, ಹಣವೂ ಬೇಡ ಎಂದಾದರೆ ವಿಶೇಷ ವಿಮಾನದಲ್ಲಿ ಮುಂಬೈಗೆ ಹೋಗಿ ಏಕೆ ಕುಳಿತಿದ್ದೀರಿ, ಮುಂಬೈನಲ್ಲಿದ್ದುಕೊಂಡು ಮಾತನಾಡುವುದಲ್ಲ, ವಿಧಾನ ಸಭೆಗೆ ಬನ್ನಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆ, ಮತ್ತಷ್ಟು ವಿಚಾರಗಳ ಬಿಚ್ಚಿಡುತ್ತೇನೆ ಎಂದು ಎಚ್ ವಿಶ್ವನಾಥ್ ಅವರಿಗೆ ಸಚಿವ ಸಾ ರಾ ಮಹೇಶ್ ಬಹಿರಂಗ ಸವಾಲು ಹಾಕಿದ್ದಾರೆ.
28 ಕೋಟಿ ರೂಪಾಯಿ ಸಾಲ ತೀರಿಸಲು ಎಚ್ ವಿಶ್ವನಾಥ್ ಅವರು ಬಿಜೆಪಿ ಸೇರುತ್ತಿದ್ದಾರೆ ಎಂದು ನಿನ್ನೆ ಸದನದಲ್ಲಿ ಆರೋಪಿಸಿದ್ದ ಸಾ ರಾ ಮಹೇಶ್, ಇಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸೋಮವಾರದ ವಿಧಾನಸಭೆ ಕಲಾಪಕ್ಕೆ ಬನ್ನಿ, ವಿಶ್ವನಾಥ್ ಸಮ್ಮುಖದಲ್ಲೇ ನಾನು ಮಾತನಾಡುತ್ತೇನೆ. ಅವರ ಬಗ್ಗೆ ಬಹಿರಂಗಪಡಿಸುವ ವಿಷಯ ಸಾಕಷ್ಟಿವೆ. ಸದನಕ್ಕೆ ಬಂದು ಸತ್ಯ ಹೇಳಲಿ. ಸದನದಲ್ಲಿ ಬೇಕಾದರೆ ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸಲಿ ಎಂದು ಎಚ್ ವಿಶ್ವನಾಥ್ ಗೆ ಸಾ ರಾ ಮಹೇಶ್ ಪಂಥಾಹ್ವಾನ ನೀಡಿದ್ದಾರೆ.
ಪಕ್ಷದ ಮುಖಂಡರ ವಿರೋಧದ ನಡುವೆಯೂ ನಿಮ್ಮನ್ನು ಪಕ್ಷಕ್ಕೆ ಕರೆತಂದಿದ್ದು ನನ್ನ ತಪ್ಪು. ನನ್ನನು ನೀವು ಜಾತಿವಾದಿ ಎಂದು ಹೇಳಿದ್ದೀರಿ. ನೀವು ನಿಮ್ಮ ಬಗ್ಗೆ ಸತ್ಯ ಸಂಗತಿಯನ್ನು ಬಹಿರಂಗಪಡಿಸಲು ಸೋಮವಾರ ಸದನಕ್ಕೆ ಬನ್ನಿ. ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನಮ್ಮ ಪಕ್ಷದ ಶಾಸಕರು ನಿಮ್ಮ ಜೊತೆ ಮುಂಬೈಗೆ ಹೋಗಿದ್ದಾರೆ. ಆದರೆ, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಎಚ್ ವಿಶ್ವನಾಥ್ ನನ್ನ ಬಗ್ಗೆ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದು ಸಾ ರಾ ಮಹೇಶ್ ಕಿಡಿಕಾರಿದ್ದಾರೆ.
ಯಾವುದೇ ಅಮಿಷಕ್ಕೊಳಗಾಗದೇ ರಾಜೀನಾಮೆ ನೀಡಿದ್ದೇನೆಂದು ಆಣೆ ಪ್ರಮಾಣ ಮಾಡಿದ ಹೆಚ್. ವಿಶ್ವನಾಥ್ ಅವರನ್ನು ತರಾಟೆಗೆ ತೆಗೆದುಕೊಂಡ ಸಾ.ರಾ. ಮಹೇಶ್, ನೀವು ಯಾವ ಆಸೆಗೆ ಹೋಗಿದ್ದೀರೋ ಹೋಗಿ. ನಿಮ್ಮ ವೈಯಕ್ತಿಕ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ನನ್ನ ವೈಯಕ್ತಿಕ ವಿಚಾರಕ್ಕೆ ಬಂದರೆ ಸುಮ್ಮನೆ ಬಿಡಲ್ಲ. ನೀವು ಯಾವ ದೇವಸ್ಥಾನಕ್ಕಾದರೂ ಬನ್ನಿ, ನಾನೂ ಆಣೆ ಮಾಡಿ ಹೇಳುತ್ತೇನೆ ಎಂದು ಸವಾಲು ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics