ಬೆಂಗಳೂರು: ವಿಶ್ವಾಸಮತ ನಿರ್ಣಯದ ಮೇಲಿನ ಮತದಾನಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಂದ ವಿಳಂಬ ಧೋರಣೆ ಹಾಗೂ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರ ಸೂಚನೆಯನ್ನು ಮುಖ್ಯಮಂತ್ರಿ ನಿರ್ಲಕ್ಷಿಸಿರುವುದರಿಂದ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ವಿಶ್ವಾಸಮತ ನಿರ್ಣಯದ ಮೇಲಿನ ಮತದಾನಕ್ಕೂ ಕಾಯದೆ ಸಮಿಶ್ರ ಸರ್ಕಾರ ರಚನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ವಿಶ್ವಾಸಮತ ನಿರ್ಣಯದ ಮೇಲಿನ ಮತದಾನ ಒಂದು ದಿನದಲ್ಲೇ ಮುಗಿಯುತ್ತದೆ. ಅಂದೇ ಮತಕ್ಕೂ ಹಾಕಲಾಗುತ್ತದೆ. ಆದರೆ, ಈ ಪ್ರಕ್ರಿಯೆಗೆ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂದರು.
ಸದನದಲ್ಲಿ ಬಹುಮತ ಇಲ್ಲ ಎಂಬುದು ಗೊತ್ತಾಗಿ ಉದ್ದೇಶಪೂರ್ವಕವಾಗಿ ವಿಶ್ವಾಸಮತಯಾಚನೆಯನ್ನು ವಿಳಂಬ ಮಾಡುತ್ತಿದ್ದಾರೆ. ಮುಂಬೈಯಲ್ಲಿರುವ 15 ಬಂಡಾಯ ಶಾಸಕರು ಬೆಂಗಳೂರಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೂ ಮೂರು ದಿನ ತೆಗೆದುಕೊಂಡರು ಸರ್ಕಾರ ಪತನ ಖಚಿತ ಎಂದರು.
ಮೈತ್ರಿ ನಾಯಕರು ರಾಜ್ಯಪಾಲರ ಸೂಚನೆ ಪಾಲಿಸುತ್ತಿಲ್ಲ. ಸಂವಿಧಾನದ ಎಲ್ಲ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಕಾಲಹರಣ ಮಾಡುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಶೆಟ್ಟರ್ ಆರೋಪಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos